ಮಂಗಳೂರು: ನಗರದ ಫಲ್ಗುಣಿ ನದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಜಮಾವಣೆಗೊಂಡಿದೆ. ನದಿಯ ಬದಿಯಲ್ಲಿ ಬಿದ್ದಿರುವ ಲೋಡುಗಟ್ಟಲೆ ಕಸದ ರಾಶಿಯನ್ನು ಕಂಡು ಪರಿಸರ ಪ್ರೇಮಿಗಳು ಶಾಕ್ ಗೊಳಗಾಗಿದ್ದಾರೆ. ನಿನ್ನೆ ಇಡೀ ದಿನದ ಪರಿಸರ ಪ್ರೇಮಿಗಳ ಶ್ರಮದ ಪರಿಣಾಮ ಸುಮಾರು 10 ಲೋಡ್ ನಷ್ಟು ತ್ಯಾಜ್ಯ ಸಂಗ್ರಹವಾಗಿದೆ.
ನೆರೆಯಲ್ಲಿ ರೋಡು, ತೋಡು, ಜನವಸತಿ ಪ್ರದೇಶಗಳಿಂದ ಅಗಾಧ ಪ್ರಮಾಣದ ತ್ಯಾಜ್ಯ ನದಿಯೊಡಲು ಸೇರಿದೆ. ಇವುಗಳಲ್ಲಿ ಲೋಡುಗಟ್ಟಲೆ ಪ್ಯಾಂಪರ್ಸ್, ಪ್ಯಾಡ್, ಲಿಕ್ಕರ್ ಬಾಟಲಿಗಳು, ನೀರಿನ ಬಾಟಲಿಗಳು, ಇನ್ನಿತರ ಪ್ಲಾಸ್ಟಿಕ್ ಗಳು ಸೇರಿದಂತೆ ಅಗಾಧ ಪ್ರಮಾಣದ ತ್ಯಾಜ್ಯ ನಗರದ ಬಂಗ್ರ ಕೂಳೂರು ಪರಿಸರದ ಫಲ್ಗುಣಿ ನದಿ ತೀರದಲ್ಲಿ ಜಮಾವಣೆಯಾಗಿತ್ತು.
ಈ ತ್ಯಾಜ್ಯ ರಾಶಿಯನ್ನು ನದಿಯೊಡಲಿನಿಂದ ಮೇಲೆತ್ತಲು ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರ ಮುಂದಾಳತ್ವದಲ್ಲಿ ಸ್ಕೂಲ್ ಆಫ್ ರೋಶನಿ ನಿಲಯ, ಸಿಒಡಿಪಿ ವಿದ್ಯಾರ್ಥಿಗಳ ಸಹಿತ 27 ಮಂದಿಯ ತಂಡ ಬೆಳಗ್ಗಿನಿಂದ ರಾತ್ರಿಯವರೆಗೆ ಶ್ರಮವಹಿಸಿದೆ. ಸ್ವಚ್ಚತಾ ಕಾರ್ಯ ಸಂಪೂರ್ಣವಾದ ಬಳಿಕ 4 ಲೋಡು ತ್ಯಾಜ್ಯವನ್ನು ಮರುಸಂಸ್ಕರಣಾ ಘಟಕಕ್ಕೆ ಸಾಗಿಸಲಾಗಿದೆ. ಆರು ಲೋಡು ಕಸವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಗೆ ಕಳುಹಿಸಲಾಗಿದೆ.