ಚಾಮರಾಜನಗರ,ಜು.19- ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಅರ್ಚಕರೊಬ್ಬರು ಇಂದು ಮುಂಜಾನೆ ದೇವರಿಗೆ ಪೂಜೆ ನೆರವೇರಿಸಿ ದೇವರ ಉತ್ಸವದಲ್ಲಿ ಪಾಲ್ಗೊಳ್ಳುವ ವೇಳೆ ಕುಸಿದು ಬಿದ್ದು,
ಸಾವನ್ನಪ್ಪಿದ್ದಾರೆ.
ದೊಡ್ಡಾಣೆ ಗ್ರಾಮದ ಅರ್ಚಕ ನಾಗಣ್ಣ(45) ಮೃತಪಟ್ಟವರು. ಇತ್ತೀಚೆಗೆ ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸವಿದ್ದ ನಾಗಣ್ಣ ಅವರು ಬೇಡಗಂಪಣ ಸಮುದಾಯದ ಉಪ ಅರ್ಚಕರಾಗಿದ್ದರು.
ನಾಗಣ್ಣ ಅವರಿಗೆ ಈ ತಿಂಗಳು ಮಲೆ ಮಹದೇಶ್ವರ ದೇಗುಲದಲ್ಲಿ ಸರದಿ ಪೂಜೆ ಮಾಡಲು ಅವಕಾಶ ಸಿಕ್ಕಿದ್ದು ಮುಂಜಾನೆ ದೇವಸ್ಥಾನಕ್ಕೆ ಬಂದು ಬೆಳಗಿನ ಪೂಜಾ ಕಾರ್ಯ ಮುಗಿಸಿದ್ದರು.
ದೇಗುಲದ ಹೊರಗೆ ಉತ್ಸವ ಬರುವ ಸ್ಥಳದಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ನಡೆದು ಹೋಗುವಾಗ ಕುಸಿದು ಬಿದ್ದಿದ್ದಾರೆ.
ಜತೆಗಿದ್ದ ಅರ್ಚಕರು ತಕ್ಷಣ ನಾಗಣ್ಣ ಅವರನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಹನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ತಾಳಬೆಟ್ಟದ ಬಳಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.