ಬೆಳಗಾವಿ,ಜು.29-ಸಾಮಾಜಿಕ ಜಾಲತಾಣದಿಂದ ರಾತ್ರೋರಾತ್ರಿ ಖ್ಯಾತಿ ಪಡೆಯಬೇಕು ಎಂದು ಅದೆಷ್ಟೋ ಯುವತಿಯರು ಫೇಸ್ಬುಕ್, ಇನ್ಸ್ಟಾಗ್ರಾಮ್ಗಳಲ್ಲಿ ಫೋಟೋ ಹಾಕಿ ಲೈಕ್ ಕಮೆಂಟ್ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.
ಇದನ್ನೇ ಲಾಭ ಮಾಡಿಕೊಂಡ ಖತರ್ನಾಕ್ ಖದೀಮನೊಬ್ಬ ಅದೇ ಸುಂದರ ಯುವತಿಯರ ಫೋಟೋಗಳನ್ನೇ ಬಳಸಿಕೊಂಡು ಹಲವು ಯುವಕರಿಗೆ 19 ಲಕ್ಷಕ್ಕೂ ಹೆಚ್ಚಿನ ವಂಚನೆ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಿಪ್ಪಾಣಿ ತಾಲೂಕಿನ ನಾಯಿ ಹಿಂಗ್ಲಜ್ ಗ್ರಾಮದ ಮಹಾಂತೇಶ್ ಮೂಡಸೆ ಬಂಧಿತ ಆರೋಪಿಯಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಕಳೆದ 2016ರಲ್ಲಿ ಎಂ. ಸ್ನೇಹಾ ಎಂಬ ಹೆಸರಿನಲ್ಲಿ ನಕಲಿ ಫೇಕ್ ಐಡಿ ಸೃಷ್ಟಿಸಿ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದು ಹಣ ಮಾಡಲು ಕಳ್ಳದಾರಿ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಯುವತಿಯರ ಸುಂದರ ಪೋಟೋಗಳನ್ನು ಡೌನ್ಲೋಡ್ ಮಾಡಿಟ್ಟಿಕೊಳ್ಳುತ್ತಿದ್ದನು.
ವಾಟ್ಸ್ಆ್ಯಪ್ನ ಡಿಪಿಗೂ ಅದೇ ಯುವತಿಯ ಫೋಟೋಗಳನ್ನು ಹಾಕುತ್ತಿದ್ದನು. ಬಳಿಕ ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಯುವಕರಿಗೆ ಮನವಿ ಕಳುಹಿಸುತ್ತಿದ್ದು ಇತ್ತ ಯುವತಿ ಫೋಟೋವನ್ನು ನೋಡಿ ಹಿಂಬಾಲಿಸುವ ಯುವಕರನ್ನೇ ಗುರಿಯಾಗಿಸಿ ಪರಿಚಯ ಮಾಡಿಕೊಂಡು ಸಲುಗೆಯಿಂದ ಇರುತ್ತಿದ್ದ.
ಚೆಂದದ ಯುವತಿಯ ಫೋಟೋಗಳನ್ನು ನೋಡಿ ಮಳ್ಳಾದ ಯುವಕರಿಂದ ಹೇಗೋ ಅವರ ಫೋನ್ ನಂಬರ್ಗಳನ್ನು ಪಡೆದುಕೊಳ್ಳುತ್ತಿದ್ದನು. ಆದರೆ, ಯುವಕರೊಂದಿಗೆ ಫೋನ್ನಲ್ಲಿ ಮಾತನಾಡದೇ ಬರೀ ಚಾಟ್ ಮಾಡುತ್ತಿದ್ದ.
ಈ ವೇಳೆ ಕೆಲವು ಯುವಕರಿಗೆ ಫೋಟೋಗಳನ್ನ ವಾಟ್ಸ್ಆ್ಯಪ್ ಮಾಡುತ್ತಿದ್ದನಂತೆ. ಯುವತಿ ಅಂತಾ ನಂಬಿದ ಕೆಲವರಿಗೆ ಪಂಗನಾಮ ಹಾಕಿದ್ದಾನೆ. ಹಣದ ಅವಶ್ಯಕತೆ ಇದೆ ಅಂತಾ ಹತ್ತು ಸಾವಿರ, ಇಪ್ಪತ್ತು ಸಾವಿರ, ಐವತ್ತು ಸಾವಿರವರೆಗೂ ಹಣ ಹಾಕಿಸಿಕೊಂಡು ಬಳಿಕ ನಂಬರ್ ಬ್ಲಾಕ್ ಮಾಡುತ್ತಿದ್ದ.
ಹೀಗೆ ಒಂದೇ ಯುವತಿ ಫೋಟೋ ಹಾಕಿ ಅವರ ಹೆಸರಿನಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಪಾಲೋವರ್ಸ್ ಇದ್ದಾರೆ.
ತನ್ನ ಪೋಟೋ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದ ಯುವತಿ ಶಾಕ್ ಆಗಿದ್ದಾರೆ. ಇತ್ತ ಯುವತಿ ದುಬೈನಲ್ಲಿ ಸೆಟ್ಲ್ ಆಗಿದ್ದು, ತನ್ನ ಪೋಟೋ ಮಿಸ್ ಯೂಸ್ ಆಗಿದ್ದನ್ನ ಕಂಡು ಶಾಕ್ ಆಗಿ ಖುದ್ದು ಮಹಾಂತೇಶ್‌ಗೆ ಮೆಸೇಜ್ ಮಾಡಿ ಅಕೌಂಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾಳೆ.
ಇಷ್ಟಾದರೂ ಆತ ಮಾತು ಕೇಳದಿದ್ದಾಗ, ಜು.4ರಂದು ಬೆಳಗಾವಿಗೆ ಆಗಮಿಸಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ದೈಹಿಕ ಪರೀಕ್ಷೆ ಪಾಸ್ :
ಬಂಧಿತ ಆರೋಪಿ ಮಹಾಂತೇಶ ಕಳೆದ ಹಲವು ದಿನಗಳ ಹಿಂದೆ ನಡೆದಿದ್ದ ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿದ್ದನು ಎಂಬ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ.
ಯುವಕರಿಗೆ ಮೋಸ ಮಾಡಿ ಬಂದ ಹಣವನ್ನ ತೆಗೆದುಕೊಂಡು ಗೋವಾ ರಾಜ್ಯಕ್ಕೆ ಹೋಗಿ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಾಕುವ ಮುನ್ನವೇ ಯುವತಿಯರು ಎಚ್ಚರಿಕೆಯಿಂದ ಇರಬೇಕು ಎಂದು ಎಂ.ಬಿ.ಬೋರಲಿಂಗಯ್ಯ ಅವರು ಮನವಿ ಮಾಡಿದ್ದಾರೆ.
Previous Articleಸುರತ್ಕಲ್: ಫಾಝಿಲ್ ಮೃತದೇಹ ಅಂತ್ಯಕ್ರಿಯೆಗೆ ಮಸೀದಿಗೆ
Next Article ನಾಪತ್ತೆಯಾಗಿದ್ದವರು ಚೆನ್ನೈನಲ್ಲಿ ಪತ್ತೆ