ಬೆಂಗಳೂರು – ಲೋಕಸಭೆಗೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಕರ್ನಾಟಕ ಹಲವಾರು ವಿಷಯಗಳಿಂದ ಗಮನ ಸೆಳೆಯುತ್ತಿದೆ.ಈ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಗ್ಯಾರಂಟಿ ಗಳು ಕರ್ನಾಟಕದಲ್ಲಿ ರೂಪುಗೊಂಡವು.
ಗ್ಯಾರಂಟಿಗಳ ಘೋಷಣೆ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೆರೆಯ ರಾಜ್ಯದಲ್ಲೂ ಅದನ್ನು ಪ್ರಯೋಗಿಸಿ ಯಶಸ್ಸು ಪಡೆಯಿತು.
ಮೊದಲಿಗೆ ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಯಾವಾಗ ಕಾಂಗ್ರೆಸ್ ಗ್ಯಾರಂಟಿಗಳಿಂದ ಯಶಸ್ಸು ಪಡೆಯಿತೋ ಅವಾಗಿನಿಂದ ತನ್ನ ನಿಲುವು ಬದಲಾಯಿಸಿತು ಇದೀಗ ಸುಭದ್ರ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಿಗೆ ಮೋದಿ ಕಾ ಗ್ಯಾರಂಟಿ ಎಂದು ಹೇಳಿ ಲಾಭ ಪಡೆಯಲು ಮುಂದಾಗಿದೆ ಈ ಮೂಲಕ ಕರ್ನಾಟಕ ಗ್ಯಾರಂಟಿ ದೇಶಾದ್ಯಂತ ಸದ್ದು ಮಾಡುತ್ತಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಹಿನ್ನಡೆ ಹೊಂದಿದೆ ಆದರೆ ಕರ್ನಾಟಕದಲ್ಲಿ ಗಮನಾರ್ಹ ರೀತಿಯಲ್ಲಿ ಸಂಘಟನೆ ಪ್ರಾಬಲ್ಯ ಪಡೆದಿದೆ ಇದನ್ನು ದಾಳವಾಗಿ ಬಳಸಿಕೊಂಡು ಕರ್ನಾಟಕ ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂದು ಬಿಂಬಿಸಲು ಕೇಸರಿ ಪಡೆ ಕಾರ್ಯತಂತ್ರ ರೂಪಿಸುತ್ತದೆ. ಈ ಮೂಲಕ ಕರ್ನಾಟಕ ದೇಶದ ಬಿಜೆಪಿ ನಾಯಕರ ಆಸಕ್ತಿಯ ತಾಣವಾಗಿದೆ.
ಕಾಂಗ್ರೆಸ್ ಆಡಳಿತ ಇರುವ ದೇಶದ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವೇ ಪ್ರಮುಖವಾದದ್ದು. ಕಳೆದ ಹತ್ತು ವರ್ಷಗಳಿಂದ ಸೋಲಿನ ದವಡೆಯಲ್ಲಿ ಸಿಲುಕಿ ಅದರಿಂದ ಹೊರಬರಲು ಪರದಾಡುತ್ತಿರುವ ಕಾಂಗ್ರೆಸ್ ,ಕರ್ನಾಟಕದತ್ತ ಆಸೆಯ ಕಣ್ಣುಗಳಿಂದ ನೋಡುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರು ಕರ್ನಾಟಕದವರೇ ಆಗಿದ್ದು ಕಾಂಗ್ರೆಸ್ ಇಲ್ಲಿಂದ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಸದ್ಯದಲ್ಲೇ ನಡೆಯುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ. ಈ ಮೂಲಕ ಕರ್ನಾಟಕದ ಚುನಾವಣೆಯ ಫಲಿತಾಂಶ ಹಾಗೂ ಈ ಕುರಿತಾದ ರಾಜಕೀಯ ವಿದ್ಯಮಾನಗಳು ದೇಶದ ರಾಜಕೀಯ ದಿಕ್ಕು ದಿಸೆಗಳನ್ನು ನಿರ್ಧರಿಸಬಲ್ಲ ಸಂಗತಿಗಳಾಗಿ ಹೊರಹೊಮ್ಮತೊಡಗಿವೆ.
ಪ್ರಮುಖವಾಗಿ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಗಮನ ಸೆಳೆದಿದೆ. ಇಲ್ಲಿ ಸಣ್ಣದಾಗಿ ಕಾಣಿಸಿಕೊಂಡಿರುವ ಘಟನಾವಳಿ ಮುಂದೆ ದೇಶಾದ್ಯಂತ ವ್ಯಾಪಿಸಬಹುದೇನೋ ಎಂಬ ಚರ್ಚೆಗೆ ಗ್ರಾಸವಾಗಿದೆ.
ದೇಶದ ಬಿಜೆಪಿಯ ಪ್ರಶ್ನಾತೀತ ಹಾಗೂ ಪರಮೋಚ್ಚ ನಾಯಕರು ಎಂದೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೇಳಿದ ಮಾತುಗಳು ಬಿಜೆಪಿ ನಾಯಕರ ಪಾಲಿಗೆ ವೇದವಾಕ್ಯ. ಅವರು ಮನವಿ ಮಾಡಿದರೂ ಬಿಜೆಪಿ ನಾಯಕರು ಅದನ್ನು ಆದೇಶ ಎಂದು ಪರಿಗಣಿಸಿ ಮರು ಮಾತಿಲ್ಲದೆ ಪರಿಪಾಲಿಸುತ್ತಿದ್ದಾರೆ. ಈ ಮೂಲಕ ಇವರ ಸೂಚನೆಗಳು ಬಿಜೆಪಿಯ ಪಾಲಿಗೆ ಲಕ್ಷ್ಮಣ ರೇಖೆ ಎಂದೆನಿಸುತ್ತದೆ.
ಇಂತಹ ಪರಮೋಚ್ಚ ನಾಯಕರ ಮಾತುಗಳು ಮತ್ತು ನಾಯಕತ್ವದ ಬಗ್ಗೆ ಕರ್ನಾಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಅಪಸ್ವರ ಕಾಣಿಸಿಕೊಂಡಿದೆ ಈ ಮೂಲಕ ಇಲ್ಲಿಯವರೆಗೆ ಇವರನ್ನು ಪ್ರಶ್ನಾತೀತ ನಾಯಕರು ಎಂದು ಪರಿಗಣಿಸಿದ್ದವರು ಕರ್ನಾಟಕದಲ್ಲಿ ಮುಂದೆ ಏನಾಗುತ್ತದೆ ಎಂಬುದನ್ನು ಗಮನಿಸುತ್ತಿದ್ದಾರೆ.
ಬಿಜೆಪಿಯ ಭೀಷ್ಮ ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ, ರಾಮ್ ನಾಯಕ್, ಕಲ್ಯಾಣ್ ಸಿಂಗ್, ಉಮಾ ಭಾರತಿ ಸೇರಿದಂತೆ ಹಲವಾರು ನಾಯಕರನ್ನು ಮಾರ್ಗದರ್ಶಕ ತನ್ನನ್ನು ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಿಸಿಕೊಂಡರೋ ಆ ಗಳಿಗೆಯಿಂದ ಇಲ್ಲಿಯವರೆಗೆ ಮೋದಿ-ಶಾ ಗುಜರಾತಿ ಜೋಡಿ ಬಿಜೆಪಿ ಪಕ್ಷವನ್ನು ಅಕ್ಷರಶಃ ತನ್ನ ಬಿಗಿ ಹಿಡಿತಕ್ಕೆ ತೆಗೆದುಕೊಂಡಿದೆ.
ಬಿಜೆಪಿಯಲ್ಲಿ ಇವರಿಬ್ಬರ ಸಾಮ್ರಾಜ್ಯ ಆರಂಭವಾಗುವವರೆಗೆ, ಅನಂತ್ ಕುಮಾರ್, ಸುಷ್ಮಾಸ್ವರಾಜ್, ಅರುಣ್ ಜೇಟ್ಲಿ, ಮನೋಹರ್ ಪರಿಕ್ಕರ್, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಸೇರುವಂತೆ ಹಲವಾರು ನಾಯಕರು ಪಕ್ಷದ ಆಗು ಹೋಗುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು ಯಾವಾಗ ಮೋದಿ- ಶಾ ಜೋಡಿ ಪಕ್ಷದ ನಿರ್ಣಾಯಕ ಸ್ಥಾನದಲ್ಲಿ ಬಂದು ವಿರಾಜಮಾನವಾಯಿತೋ ಆ ಕ್ಷಣದಿಂದ ಈ ಎಲ್ಲಾ ನಾಯಕರು ಮೂಲೆಗುಂಪಾದರು ಮತ್ತೆ ಕೆಲವರು ಕಾಲನ ಗರ್ಭ ಸೇರಿದರು.
ರಾಜನಾಥ್ ಸಿಂಗ್ , ನಿತಿನ್ ಗಡ್ಕರಿಯಂತಹ ನಾಯಕರು ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕಳೆದು ಹೋದರು.ಹೀಗೆ ಬಿಜೆಪಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಬಂದ ಈ ಗುಜರಾತಿ ಜೋಡಿಯೆದುರು ಧೈರ್ಯವಾಗಿ ಮಾತಾಡುವ ವ್ಯಕ್ತಿಗಳೇ ಬಿಜೆಪಿಯಲ್ಲಿ ಇಲ್ಲದಂತಾಯಿತು.
ಹೈಕಮಾಂಡ್ ಎನಿಸಿದ ನಾಯಕತ್ವದ ಆದೇಶ ತಮಗೆ ಸರಿ ಕಾಣಲಿಲ್ಲ ಎಂದರೆ ಅದನ್ನು ಧಿಕ್ಕರಿಸಿ ತಾವೇ ಹೈ ಕಮಾಂಡ್ ಎಂಬಂತೆ ವರ್ತಿಸುತ್ತಿದ್ದ ಕರ್ನಾಟಕದ ರೈತ ನಾಯಕ ಯಡಿಯೂರಪ್ಪ ಅಂತವರು ಮೋದಿ ಮತ್ತು ಅಮಿತ್ ಶಾ ಮುಂದೆ ಕೈಕಟ್ಟಿ ನಿಲ್ಲುವಂತಾಯಿತು. ಈ ಇಬ್ಬರು ನಾಯಕರು ಹೇಳಿದಾಗ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಯಡಿಯೂರಪ್ಪ ಅವರು ಹೇಳಿದ ತಕ್ಷಣ ಮೂರು ಮಾತಿಲ್ಲದೆ ಸಿಎಂ ಹುದ್ದೆ ತೊರೆದು ಮನೆಗೆ ಹೋದರು.
ಹಿಂದೊಮ್ಮೆ ಕಾಂಗ್ರೆಸ್ಸಿನಲ್ಲೂ ಇಂತಹುದೇ ವಾತಾವರಣ ಇತ್ತು. ಅಂದು ಯ`ಇಂದಿರಾ ಎಂದರೆ ಇಂಡಿಯಾ’ .. ಇಂದಿರಾ ಎಂದರೆ ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕರು ಸಂಪೂರ್ಣ ಶರಣಾಗತರಾಗಿದ್ದರು. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಇಂದಿರಾಗಾಂಧಿ ಅವರ ನಾಯಕತ್ವದ ವಿರುದ್ಧ ಬಂಡಾಯದ ಧ್ವನಿಗಳು ಕೇಳಿ ಬಂದವು. ಇಂಥ ಧ್ವನಿಗಳಿಗೆ ವೇದಿಕೆಯಾಗಿದ್ದು ಕರ್ನಾಟಕ. ಒಂದು ಕರ್ನಾಟಕದಲ್ಲಿ ಕಾಂಗ್ರೆಸ್ ನ ಪ್ರಭಾವಿ ನಾಯಕರು ಎನಿಸಿದ್ದ ದಿವಂಗತ ದೇವರಾಜ ಅರಸು ಸೇರಿದಂತೆ ಅನೇಕ ನಾಯಕರು ಇಂದಿರಾ ವಿರುದ್ಧ ಬಂಡಾಯದ ಕಹಳೆ ಊದಿದ್ದು ಈಗ ಇತಿಹಾಸ.
ಇಂತಹ ಇತಿಹಾಸ ಇದೀಗ ಕರ್ನಾಟಕದಿಂದಲೇ ಮರು ಆರಂಭಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ. ಬಿಜೆಪಿ ಎಂದರೆ ಮೋದಿ ಮತ್ತು ಅಮಿತ್ ಶಾ ಎಂಬ ವಾತಾವರಣವಿದೆ ಇಂತಹ ವಾತಾವರಣದ ವಿರುದ್ಧ ಅಪಸ್ವರ ಎಂಬ ಧ್ವನಿ ಕರ್ನಾಟಕದಿಂದ ಕೇಳಿ ಬರತೊಡಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯ ಮೂಲಕ ಶುರುವಾದ ಬಿಜೆಪಿಯೊಳಗಿನ ಅಸಮಾಧಾನಗಳು ಹಾದಿ ರಂಪ ಬೀದಿರಂಪದ ಹಂತ ತಲುಪಿದವು. ಇವುಗಳನ್ನು ಸರಿಪಡಿಸಲು ರಾಜ್ಯ ನಾಯಕರು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ಅಖಾಡಕ್ಕಿಳಿದು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಯಿತು.
ಆದರೆ ಸಂಘ ಪರಿವಾರ ಹಿನ್ನೆಲೆಯಿಂದ ಬಂದ ಕೆಲವು ಪ್ರಭಾವಿ ನಾಯಕರು ಈ ಯಾವುದೇ ಪ್ರಯತ್ನಗಳಿಗೆ ತಲೆಬಾಗಲಿಲ್ಲ ಅಮಿತ್ ಶಾ ಅವರ ಮಾತುಗಳಿಗೆ ಸೊಪ್ಪು ಹಾಕಲಿಲ್ಲ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಭೆಯಿಂದ ದೂರ ಉಳಿಯುವ ಮೂಲಕ ಯಾರೂ ಕೂಡ ಪ್ರಶ್ನಾತೀತಕರು ಅಲ್ಲ ಎಂಬ ಸಂದೇಶ ರವಾನಿಸಿದರು
ರಾಜ್ಯದ ಬಿಜೆಪಿ ಕಟ್ಟಾಳುಗಳೇ ಮೋದಿ-ಶಾ ವಿರುದ್ಧ ಸಿಡಿದೇಳುವ ಮಾತಾಡುತ್ತಿದ್ದಾರೆ.
ಬಿಜೆಪಿಯಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರು ಎನಿಸಿಕೊಂಡ ಯಡಿಯೂರಪ್ಪ, ಶಿವರಾಜ ಸಿಂಗ್ ಚೌಹಾಣ್, ವಸುಂದರ ರಾಜೇ, ಮನೋಹರ್ ಲಾಲ್ ಖಟ್ಟರ್, ಉಮಾ ಭಾರತಿ ಅಂಥವರನ್ನು ಅಧಿಕಾರದಿಂದ ದೂರಸರಿಸಿದಾಗ ಅವರಾರು ಮೂರೂ ಮಾತನಾಡಲಿಲ್ಲ ಮೋದಿ ಮತ್ತು ಅಮಿತ್ ಶಾ ನಾಯಕತ್ವದ ಸೊಲ್ಲೆತ್ತಲಿಲ್ಲ
ಇಂತಹ ಬಿಗಿಹಿಡಿತದ ವಾತಾವರಣವಿರುವ ಬಿಜೆಪಿಯಲ್ಲಿ ಈಗ ಲೋಕಸಭೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಯಾವ ಮುಲಾಜೂ ಇಲ್ಲದೆ ತಮ್ಮ ಅಸಹಕಾರ ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿರುವ ಹಿರಿಯ ನಾಯಕ ಈಶ್ವರಪ್ಪ ಅಂತಹ ದೊಡ್ಡ ಪ್ರಮಾಣದ ಜನಬೆಂಬಲ ಇರುವ ನಾಯಕರೇನಲ್ಲ. ತನ್ನ ಸ್ವಂತ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೊಮ್ಮೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಈ ನಾಯಕ ಇದೀಗ,ಮೋದಿ-ಶಾ ಜೋಡಿಗೆ ಸೆಡ್ಡು ಹೊಡೆದು ಯಡಿಯೂರಪ್ಪನ ಮಗನ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಷಯ ಸಣ್ಣ ಸಂಗತಿಯಲ್ಲ.ಸ್ವತಃ ಮೋದಿ ಶಿವಮೊಗ್ಗಕ್ಕೆ ಬಂದರೂ ಈಶ್ವರಪ್ಪ, ಮೋದಿ ಕಾರ್ಯಕ್ರಮದಿಂದಲೇ ದೂರ ಉಳಿಯುವ ಮೂಲಕ ದೊಡ್ಡ ಸಂದೇಶ ರವಾನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ನಿರಾಕರಿಸಿದಾಗ, ಇದೇ ರೀತಿ ಸಿಟ್ಟುಮಾಡಿಕೊಂಡಿದ್ದ ಈಶ್ವರಪ್ಪ ಕೇವಲ ಮೋದಿಯ ಒಂದು ಫೋನ್ ಕರೆಗೆ ತಣ್ಣಗಾಗಿ ತೆಪ್ಪಗಾಗಿದ್ದರು. ಆದರೆ ಈಗ ತಮ್ಮದೇ ಜಿಲ್ಲೆಯಲ್ಲಿ ನಡೆದ ಮೋದಿಯ ಕಾರ್ಯಕ್ರಮಕ್ಕೇ ಗೈರಾಗುತ್ತಾರೆ!
ಇನ್ನು ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆ ಕೂಡಾ ಸೀದಾ ಮೋದಿ-ಶಾ ವಿರುದ್ಧ ಇಂತದ್ದೇ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ ಮೊನ್ನೆ ಕರ್ನಾಟಕಕ್ಕೆ ಬಂದಿದ್ದಾಗ ಸ್ವತಃ ಅಮಿತ್ ಶಾ ಕರೆ ಮಾಡಿದರೂ ಹೆಗಡೆ ಅವರಿಗೆ ಪ್ರತಿಕ್ರಿಯೆ ನೀಡಿಲ್ಲ.
ಅನಂತಕುಮಾರ ಹೆಗಡೆ ಅವರ ಅಸಮಾಧಾನ ತಣಿಸಲು ಅಮಿತ್ ಶಾ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಷಯದಲ್ಲಿ ಪ್ರಯತ್ನ ಪಟ್ಟರು ಸಫಲರಾಗಿಲ್ಲ ಎನ್ನುತ್ತವೆ ಅನಂತಕುಮಾರ್ ಹೆಗಡೆ ಅವರ ಆಪ್ತ ಮೂಲಗಳು.
ಕೇವಲ ಇವರಿಬ್ಬರೇ ಮಾತ್ರವಲ್ಲ, ಸುಮಾರು ಹತ್ತು ಕ್ಷೇತ್ರಗಳ ಬಿಜೆಪಿಯೊಳಗೆ ಇಂತಹ ಬಂಡಾಯಗಳು ಕಾಣಿಸಿಕೊಂಡಿವೆ.
ಬೆಳಗಾವಿಯಲ್ಲಿ ಮಹಾಂತೇಶ ಕವಟಗಿ ಮಠ,ಪ್ರಭಾಕರ ಕೋರೆ,ಹಾಸನದಲ್ಲಿ ಪ್ರೀತಂ ಗೌಡ, ಕೊಪ್ಪಳದಲ್ಲಿ ಸಂಗಣ್ಣ ಕರಡಿ, ದಾವಣಗೆರೆಯಲ್ಲಿ ರವೀಂದ್ರ ನಾಥ್ ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಸೇರಿದಂತೆ ಹಲವು ಉದಾಹರಣೆಗಳು ಕಣ್ಣಮುಂದಿವೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಒಂದು ಮಾತಿಗೆ ಗಪ್ ಚುಪ್ ಆಗುತ್ತಿದ್ದ ಬಿಜೆಪಿ ನಾಯಕರು ಈ ಮಟ್ಟಿಗೆ ಬಂಡಾಯದ ಧೈರ್ಯ ತೋರುತ್ತಿದ್ದಾರೆ.
ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಈ ಧೈರ್ಯ ಲೋಕಸಭಾ ಚುನಾವಣೆ ನಂತರದಲ್ಲಿ ಯಾವ ಸ್ವರೂಪ ಪಡೆಯಲಿದೆ.ದೇಶದಲ್ಲಿ ಇದು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ಮೂಡಿಸಿದ್ದು,ಕರ್ನಾಟಕದ ಈ ಬೆಳವಣಿಗೆಗಳು ರಾಷ್ಟ್ರದ ರಾಷ್ಟ್ರ ರಾಜಕಾರಣದ ದಿಕ್ಕು,ದಿಸೆಯಾಗಲಿವೆ.
2 Comments
круглосуточная наркологическая помощь москва https://skoraya-narkologicheskaya-pomoshch11.ru .
Вывод из запоя на дому http://www.fizioterapijakeskic.com .