ಮಂಗಳೂರು,ಜು.31– ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಗೆ ಆರೋಪಿಗಳು ಕಳೆದ ಎರಡು ತಿಂಗಳಿಂದಲೇ ಸಂಚು ರೂಪಿಸಿರುವುದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಎರಡು ತಿಂಗಳು ಕಾಲ ಕೇವಲ ವಾಟ್ಸ್‌ಆ್ಯಪ್ ಕಾಲ್‌ನಲ್ಲೇ ಮಾತನಾಡಿದ್ದ ಆರೋಪಿಗಳು, ಅದರಲ್ಲೇ ಮೆಸೇಜ್ ಕೂಡ ಮಾಡುತ್ತಿದ್ದರು ಎಂಬುದು ಬಯಲಿಗೆ ಬಂದಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿ ಈಗಾಗಲೇ ಬಂಧನದಲ್ಲಿರುವ ಆರೋಪಿಗಳಾದ ಝಾಕಿರ್ ಮತ್ತು ಶಫೀಕ್ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರಿಗೆ ಒಂದೊಂದೇ ಸಂಗತಿಗಳು ಪತ್ತೆಯಾಗುತ್ತಿವೆ.
ಹೆಚ್ಚುವರಿ ಜಿಲ್ಲಾ ಎಸ್ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಬೆಳ್ಳಾರೆ ಸುತ್ತಮುತ್ತಲಿನ 20ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅದರಲ್ಲಿ ಆರೋಪಿಗಳ ಚಲನವಲನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ಪೋನ್ ವಶಕ್ಕೆ ಪಡೆದು ಅದರಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕರೆಯ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳು ಯಾರಿಗೆ ಹೆಚ್ಚು ಕರೆ ಮಾಡಿದ್ದಾರೆ, ಆ ನಂಬರ್‌ಗಳನ್ನು ಪತ್ತೆ ಮಾಡಲಾಗುತ್ತಿದೆ.
ಒಂದು ತಿಂಗಳಿಂದ ಬೆದರಿಕೆ ಕರೆ ಬಂದಿತ್ತು ಎಂದು ಪ್ರವೀಣ್ ತನ್ನ ಸ್ನೇಹಿತರಲ್ಲಿ ಹೇಳಿದ್ದ ಎಂದು ತಿಳಿಯಲಾಗಿದೆ. ಅಲ್ಲದೆ ಬೆಳ್ಳಾರೆ ಠಾಣೆ ಸಿಬ್ಬಂದಿ ಒಬ್ಬರಿಗೆ ಮೌಖಿಕವಾಗಿ ಪ್ರವೀಣ್ ಹೇಳಿದ್ದ ಎನ್ನಲಾಗಿದ್ದು, ಆ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. ಪ್ರವೀಣ್‌ಗೆ ಬಂದಿರುವ ಕರೆಯ ನಂಬರುಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮಾಡಿದ ವಾಟ್ಸ್‌ಆ್ಯಪ್ ಕರೆ, ಯಾರಿಗೆಲ್ಲ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ಪ್ರಮುಖ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಾಯ್ಬಿಡಿಸಲು ಸಾಹಸ:
ಈ ನಡುವೆ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಜಾಕಿರ್ ಮತ್ತು ಶಫೀಕ್ ಬಾಯಿ ಬಿಡುತ್ತಿಲ್ಲ. ಇಬ್ಬರು ಉಳಿದ ಆರೋಪಿಗಳ ಬಗ್ಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಸದ್ಯ ಆರೋಪಿಗಳ ಬಾಯಿ ಬಿಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಬಂಧಿತರು ಯಾವುದೇ ಮಾಹಿತಿ ನೀಡದ ಹಿನ್ನೆಲೆ ಇನ್ನು ಪ್ರಮುಖ ಆರೋಪಿಗಳು ಪತ್ತೆ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಒಟ್ಟು ಮೂರು ಆಯಾಮಗಳಲ್ಲಿ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಸೂದ್ ಕೊಲೆಗೆ ಪ್ರತೀಕಾರ ಎನ್ನುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಹಾಗೇ ಮೀನಿನ ಟೆಂಡರ್ ತಮ್ಮವರಿಗೆ ಕೊಡಿಸಿದ್ದಕ್ಕೆ ಪ್ರವೀಣ್ ಕೊಲೆ ಆಯ್ತಾ? ಅಂತಲೂ ತನಿಖೆ ನಡೆಸುತ್ತಿದ್ದಾರೆ. ಇನ್ನು 10 ತಿಂಗಳ ಹಿಂದಷ್ಟೇ ಪ್ರವೀಣ್ ಮಾಂಸದಂಗಡಿ ಇಟ್ಟಿದ್ದರು. ಇದೇ ಕಾರಣಕ್ಕೆ ಕೊಲೆಯಾಗಿದೆಯಾ? ಎಂಬ ಮೂರು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಕರಾವಳಿ ಶಾಂತ:
ಮಸೂದ್ ಕೊಲೆ ನಡೆದ ಎರಡು ದಿನಗಳ ನಂತರ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಹತ್ಯೆಗೈಯಲಾಗಿತ್ತು. ಅಂದಿನಿಂದ ಕರಾವಳಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲದೆ ಕಾರ್ಯಕರ್ತನನ್ನು ಕಳೆದುಕೊಂಡು ಕೆರಳಿದ ಕರಾವಳಿ ಬಿಜೆಪಿ ಪಡೆ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳ್ಳಾರೆಯಲ್ಲಿ ಆರಂಭವಾದ ಪ್ರತಿಭಟನೆಯ ಕಿಚ್ಚು ಕರಾವಳಿಯನ್ನು ವ್ಯಾಪಿಸಿ ನಂತರ ಇಡೀ ರಾಜ್ಯಕ್ಕೆ ಹಬ್ಬಿದೆ. ಅದರಂತೆ ಅಲ್ಲಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತಿದ್ದು ಈ ನಡುವೆ ಕರಾವಳಿ ಪ್ರದೇಶ ಶಾಂತ ಸ್ಥಿತಿಯತ್ತ ಮರಳುತ್ತಿದೆ
Previous Articleಕಾಮನ್ವೆಲ್ತ್ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ
Next Article ಪ್ರಸಾದದ ಜೊತೆ ಬಂದ ಹಣ ಮಾದಪ್ಪನಿಗೆ ಅರ್ಪಣೆ