ಬೆಂಗಳೂರು,ಜ.8: ಮುಂಬರುವ ಲೋಕಸಭಾ Electionಗೆ ನಿಧಾನವಾಗಿ ರಂಗ ಸಜ್ಜುಗೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸಿದ್ದರೆ, ಚುನಾವಣಾ ಆಯೋಗ ಆಡಳಿತ ಯಂತ್ರವನ್ನು ಚುನಾವಣೆ ಪ್ರಕ್ರಿಯೆಗಾಗಿ ಸಜ್ಜುಗೊಳಿಸುತ್ತಿದೆ.
ಪ್ರಸಕ್ತ ಲೋಕಸಭೆಯ ಅವಧಿ ಮೇ 26ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರೊಳಗೆ ನೂತನ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಾಗಿದೆ ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಪ್ರಕಟಣೆ ಸೇರಿದಂತೆ ಎಲ್ಲ ಅಗತ್ಯ ಕಾರ್ಯಗಳನ್ನು ಚುನಾವಣಾ ಆಯೋಗ ಸಮರೋಪಾದಿಯಲ್ಲಿ ನಡೆಸುತ್ತಿದೆ.
ಉನ್ನತ ಮೂಲಗಳ ಪ್ರಕಾರ ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಲಿದ್ದು ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ.
ಅಷ್ಟರೊಳಗೆ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಫೆಬ್ರವರಿ 12 ರಿಂದ ವಿಧಾನ ಮಂಡಲದ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಿದೆ.
ಫೆಬ್ರವರಿ 12ರಂದು ರಾಜ್ಯಪಾಲ ತಾವಾರ್ ಚಂದ್ ಗೆಹ್ಲೋಟ್ ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಆನಂತರ ಫೆಬ್ರವರಿ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ಬಜೆಟ್ ಮಂಡಿಸಲಿದ್ದಾರೆ.
ಬರುವ ಫೆಬ್ರವರಿ 16ರಂದು ಬಜೆಟ್ (Karnataka State Budget ) ಮಂಡಿಸಲಿರುವ ಸಿದ್ದರಾಮಯ್ಯ ಈಗಾಗಲೇ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ಆರಂಭಿಸಿದ್ದು ಮುಂದಿನ ವಾರದೊಳಗಾಗಿ ತಮ್ಮ ತಮ್ಮ ಇಲಾಖೆಯ ಬಜೆಟ್ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಗೊತ್ತಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದ್ದು ಪ್ರಸಕ್ತ ವರ್ಷ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಮೀಸಲಿಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬರುವ ಸಾಲಿನ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ತೆಗೆದಿರಿಸಿ, ಅಭಿವೃದ್ಧಿ ಯೋಜನೆಗಳಿವು ಸಂಪನ್ಮೂಲ ತೆಗೆದಿಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ವಲಯದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ಸಂಪನ್ಮೂಲ ಕ್ರೂಢೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿರುವ ಕಸರತ್ತು ಕುತೂಹಲ ಮೂಡಿಸಿದೆ.