ಬೆಂಗಳೂರು,ಆ.1-ಮಂಗಳೂರಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ನಗರದಲ್ಲಿ ಇಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸುಳ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣದ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿ ಹಲವರನ್ನು ವಿಚಾರಣೆ ನಡೆಸಲಾಗಿದ್ದು ನಗರದಲ್ಲಿ ವಶಪಡಿಸಿಕೊಂಡ ಇಬ್ಬರು ಪ್ರವೀಣ್ ಕೊಲೆಗೆ ಸಹಕರಿಸಿದ್ದ ಮಾಹಿತಿ ಲಭ್ಯವಾಗಿದೆ.
ಪ್ರವೀಣ್ ಹತ್ಯೆ ನಂತರ ನಗರಕ್ಕೆ ಬಂದು ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಓರ್ವ ಹಿರಿಯ ಐಪಿಎಸ್ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಮಾಹಿತಿ ಸೋರಿಕೆಯಾಗದೇ ಖಾಕಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ಸುಳ್ಯ ಪೊಲೀಸರ ಜೊತೆಗೆ ನಗರದ ಒಂದು ಪೊಲೀಸ್ ತಂಡವು ಆರೋಪಿಗಳ ಪತ್ತೆಗೆ ಸಾಥ್ ನೀಡಿದ್ದು ಇಬ್ಬರನ್ನು ಬಂಧಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಪತ್ರ ಬರೆಯದ ಸಿಎಂ:
ಈ ನಡುವೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದಿದ್ದರು. ಆದರೆ ಘೋಷಣೆ ಮಾಡಿ 3 ದಿನ ಕಳೆದರೂ ಎನ್‍ಐಎ ತನಿಖೆಗೆ ರಾಜ್ಯ ಗೃಹ ಇಲಾಖೆ ಅಧಿಕೃತ ಪತ್ರವನ್ನೇ ಬರೆದಿಲ್ಲ.
ಪೊಲೀಸ್ ಮಹಾ ನಿದೇರ್ಶಕರು ರಾಜ್ಯ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಬಳಿಕ ರಾಜ್ಯ ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದ ಬಳಿಕ ರಾಷ್ಟ್ರೀಯ ತನಿಖಾ ದಳಕ್ಕೆ ಪ್ರಕರಣವನ್ನ ವರ್ಗಾಯಿಸಿ ಕೇಂದ್ರ ಗೃಹ ಇಲಾಖೆ ಸೂಚಿಸುತ್ತದೆ.
ಆದರೆ ಇಲ್ಲಿ ತನಕ ಆ ಪ್ರಕ್ರಿಯೆಗಳೇ ನಡೆದಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಇವತ್ತು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಹೋಗುವ ಸಾಧ್ಯತೆ ಇದೆ.
Previous Articleಕೋಟೆ ನಾಡಿಗೆ ರಾಹುಲ್ ಗಾಂಧಿ ಭೇಟಿ
Next Article ಮಾಜಿ ಗೃಹಮಂತ್ರಿ ಮನೆಯಲ್ಲೇ ಕಳ್ಳತನ