ತುಮಕೂರು: ಹೆತಮ್ಮನಿಗೆ ಅನ್ನ ನೀರು ನೀಡದೆ ಮನೆಯಿಂದ ಹೊರಹಾಕಿದ್ದ ಮಗ. ಮನನೊಂದ ತಾಯಿ ತಹಶೀಲ್ದಾರ್ ಮೊರೆ ಹೋಗಿದ್ದರು. ವೃದ್ಧೆಯ ಸಂಕಷ್ಟಕ್ಕೆ ಮರುಗಿದ ಅಧಿಕಾರಿ ವೃದ್ಧೆಗೆ ಮನೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರಿಲ್ಲದ ತಾಯಿಗೆ ಸೂರಿನ ಆಸರೆಯಾಗಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬುಡ್ಡಯ್ಯನಪಾಳ್ಯ ಗ್ರಾಮದ ಹಿರಿಯ ವೃದ್ದೆಗೆ ನ್ಯಾಯ ಕಲ್ಪಿಸಿರುವ ವಿಶೇಷ ಪ್ರಕರಣವೊಂದು ನಡೆದಿದೆ. ಮಾನಸಿಕ ಮತ್ತು ದೈಹಿಕವಾಗಿ ಮನನೊಂದು ಬೀದಿಯಲ್ಲಿ ದಿನಕಳೆಯುತಿದ್ದ ಹಿರಿಯ ಜೀವಕ್ಕೆ ಆಶ್ರಯ ಸಿಕ್ಕಂತಾಗಿದೆ.
ವೃದ್ದೆ ರಂಗಹನುಮಕ್ಕನಿಗೆ ತವರು ಮನೆಯಿಂದ ಮನೆಯೊಂದು ಉಡುಗೊರೆ ಸಿಕ್ಕಿತ್ತು. ಈಗಾಗಲೇ ತನ್ನ ಮಗನಿಗೆ ಮನೆ ಮತ್ತು ಜಮೀನು ಎರಡನ್ನು ನೀಡಿದ್ದಾರೆ. ಈಗಿರುವ ತನ್ನ ಮನೆಯಲ್ಲಿನ ಒಂದು ಸಣ್ಣ ಕೊಣೆಯೊಳಗೆ ವಾಸಿಸಲು ಅವಕಾಶ ನೀಡದಿರುವ ಮಗನ ಮೇಲೆ ಸಾರ್ವಜನಿಕ ವಲಯದಲ್ಲಿ ತೀರ್ವ ಆಕ್ರೋಶ ವ್ಯಕ್ತವಾಗಿತ್ತು. ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ತೀರ್ಪು ಸಹ ವೃದ್ದೆಯ ಪರವಾಗಿಯೇ ಬಂದಿರುವುದು ಸಂತಸ ತಂದಿದೆ.
ಮನೆಯ ಬೀಗ ಒಡೆಸಿದ ತಹಶೀಲ್ದಾರ್:
ವೃದ್ದೆಯಿಂದ ತಹಶೀಲ್ದಾರ್‌ಗೆ ದೂರು ಬಂದ ತಕ್ಷಣವೇ ಮಧುಗಿರಿ ಎಸಿಯವರ ಗಮನಕ್ಕೆ ತಂದಿದ್ದಾರೆ. ದೂರು ಆಲಿಸಿದ ಮಧುಗಿರಿ ಎಸಿ ಹಿರಿಯ ನಾಗರೀಕರ ಕಾಯ್ದೆಯ ಅನ್ವಯ ವೃದ್ದೆಗೆ ಮನೆ ನೀಡಿ ಮಗ ಮತ್ತು ಸೊಸೆಯ ವಿರುದ್ದ ಕ್ರಮಕ್ಕೆ ಸೂಚಿಸುತ್ತಾರೆ. ಆದೇಶದ ಅನ್ವಯ ತಹಶೀಲ್ದಾರ್ ನಾಹೀದಾ ಮತ್ತು ಸಿಪಿಐ ಸಿದ್ದರಾಮೇಶ್ವರ ಖುದ್ದು ಗ್ರಾಮಕ್ಕೆ ಬೇಟಿ ನೀಡಿ ಮನೆಯ ಬೀಗ ಹೊಡೆದು ವೃದ್ದೆಗೆ ವಾಸಿಸಲು ಅವಕಾಶ ಮಾಡಿಕೊಟ್ಟು ವೃದ್ದೆಗೆ ಸಮರ್ಪಕ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ವೃದ್ದೆಯ ಮಗನಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್
ಮನೆಯ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದ ಮಗ ರಮೇಶ್‌ಗೆ ದೂರವಾಣಿ ಮೂಲಕ ಸಂರ್ಪಕಿಸಿದ ತಹಶೀಲ್ದಾರ್ ನಾಹೀದಾ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದಾರೆ. ತಹಶೀಲ್ದಾರ್‌ಗೆ ನಿರ್ಲಕ್ಷದ ಉತ್ತರ ನೀಡಿದ ರಮೇಶ್‌ಗೆ ಮತ್ತೆ ಮನೆಯೊಳಗೆ ನೀವು ಹೊಗಬಾರದು, ಅಜ್ಜಿಗೆ ತೊಂದರೆ ನೀಡಬಾರದು. ನಿಮಗೆ ಏನಾದರೂ ಬೇಕಾದ್ರೆ ತಹಶೀಲ್ದಾರ್ ಕಚೇರಿಗೆ ಬನ್ನಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವೃದ್ದೆ ರಂಗಹನುಮಕ್ಕ ದೂರಿನ ಅನ್ವಯ ಮಗ ಮತ್ತು ಸೂಸೆ ಲಲಿತಮ್ಮ ವಿರುದ್ದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಹಶೀಲ್ದಾರ್ ಬಳಿ ವೃದ್ದೆ ರಂಗಹನುಮಕ್ಕ ನಾನು ಊಟ-ತಿಂಡಿ ಮಾಡದೆ ವರ್ಷಗಟ್ಟಲೆ ವನವಾಸ ಮಾಡಿದ್ದೇನೆ. ನನ್ನ ಮೇಲೆ ಗಲಾಟೆ ಮಾಡಿ ಮಗ-ಸೂಸೆ ಮನೆಯಿಂದ ಹೊರಗಡೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮಾನ್ಯ ತಹಶೀಲ್ದಾರ್ ಮೇಡಂ ಮತ್ತೆ ನನಗೆ ಮನೆ ಕೊಡಿಸಿದ್ದಾರೆ. ಮತ್ತೆ ನನಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.