ಯಾದಗಿರಿ,ಆ.5-ಮಂಡೆ ತೆಗೆಯುವ(ಜವಳ) ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ವಾಪಸಾಗುವಾಗ ಜವರಾಯನಂತೆ ಬಂದ ಲಾರಿ ಡಿಕ್ಕಿ ಹೊಡೆದು ಮಗು ಸೇರಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ತಡರಾತ್ರಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ಮಹ್ಮದ್ ವಾಜೀದ್ ಹುಸೇನ್(39), ಮಹ್ಮದ್ ಮಜರ್ ಹುಸೇನ್(79), ನೂರ್ ಜಹಾನ್ ಬೇಗಂ(70), ಹೀನಾ ಬೇಗಂ(30), ಇಮ್ರಾನ್(22) ಮತ್ತು ಉಮೇಜಾ (6ತಿಂಗಳು) ಮೃತಪಟ್ಟವರು.
ಇನ್ನು ಗಂಭೀರವಾಗಿ ಗಾಯಗೊಂಡ ಬಾಲಕ ಮಹ್ಮದ್ ಪಾಜೀಲ್ ಹುಸೇನ್ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿಯು ಗಂಭೀರವಾಗಿದೆ.
ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾದಲ್ಲಿ ಮಗಳ ಜವಳ ಕಾರ್ಯಕ್ರಮ ಮಾಡಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ದುರಂತ ಸಂಭವಿಸಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಪಿಐ ದೌವಲತ್ ಕುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.