ಬೆಂಗಳೂರು,
ಅಧಿಕಾರ ಹಸ್ತಾಂತರ ಕುರಿತಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ನಾನು ಕೂಡ ಇದ್ದೇನೆ ಎಂದು ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ಘೋಷಿಸಿದ್ದಾರೆ.
ಪರಮೇಶ್ವರ್ ಅವರ ಈ ಹೇಳಿಕೆಯ ಮೂಲಕ ವಿದ್ಯಮಾನಗಳಿಗೆ ಕುತೂಹಲಕರ ತಿರುವು ಸಿಕ್ಕಿದೆ. ಸುದೀರ್ಘ ಅವಧಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ನಾನು ಕೂಡ ಪ್ರಬಲ ಆಕಾಂಕ್ಷಿ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬಗ್ಗೆಯಾಗಲಿ ಅಥವಾ ಬದಲಾವಣೆಯ ಕುರಿತಾಗಲಿ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಬಹುದು. ಉಳಿದಂತೆ ಹೈಕಮಾಂಡ್ ನಾಯಕರು ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಯಾರಾದರೂ ನನ್ನ ಹೆಸರನ್ನು ಕೂಗಿದ ತಕ್ಷಣ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಹಾಗೆ ಕೂಗುವುದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ನನ್ನ ಸಾಮರ್ಥ್ಯವನ್ನು ಎಷ್ಟು ಬಾರಿ ಸಾಬೀತುಪಡಿಸಬೇಕು. ಕೆಪಿಸಿಸಿ ಅಧ್ಯಕ್ಷನಾಗಿ ಎಂಟು ವರ್ಷ ಕೆಲಸ ಮಾಡಿದ್ದೇನೆ. ಎರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಸಾಮರ್ಥ್ಯ ಇಲ್ಲದೆ ಇದ್ದರೆ ಉಪಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೆ. ನನ್ನ ಸಾಮರ್ಥ್ಯದ ಬಗ್ಗೆ ಯಾರು ಪ್ರಶ್ನೆ ಮಾಡುವಂತಿಲ್ಲ. ಹಲವಾರು ಬಾರಿ ನಾನು ಅದನ್ನು ಸಾಬೀತುಪಡಿಸಿದ್ದೇನೆ. ಆದರೆ ಸನ್ನಿವೇಶ ಮತ್ತು ಪಕ್ಷದ ತೀರ್ಮಾನ ಎಲ್ಲವನ್ನೂ ಆಧರಿಸಿರುತ್ತದೆ ಎಂದು ವಿಶ್ಲೇಷಿಸಿದರು.
ಇದರ ಹೊರತಾಗಿ ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೇನೆ. ಈ ವಿಚಾರವಾಗಿ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಯಾರೋ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಕೇವಲ ಈ ಬಗ್ಗೆ ಚರ್ಚೆ ಮಾಡಬಹುದಷ್ಟೇ ಎಂದು ಸ್ಪಷ್ಟಪಡಿಸಿದರು.
ಇದೇ ವಿಚಾರಕ್ಕಾಗಿ ನಾನು ದೆಹಲಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ ಶಿಕ್ಷಣ ಸಂಸ್ಥೆ ಮತ್ತು ವ್ಯವಹಾರಗಳನ್ನು ಹೊಂದಿರುವ ನಾನು ಹಲವಾರು ವಿಚಾರಗಳಿಗಾಗಿ ಆಗಿಂದಾಗ್ಗೆ ದೆಹಲಿಗೆ ಹೋಗುತ್ತಿರುತ್ತೇನೆ ಈ ವೇಳೆ ಹೈಕಮಾಂಡ್ ನ ಕೆಲವು ನಾಯಕರು ಕೂಡ ಭೇಟಿ ಮಾಡಿ ಚರ್ಚೆ ಮಾಡುತ್ತಿರುತ್ತೇನೆ ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಹೇಳಿದರು.
