ಬೆಳಗಾವಿ,ಡಿ.18:
ತಮ್ಮ ವಿರುದ್ಧ ಕೇಳಿ ಬಂದಿರುವ ಭೂ ಕಬಳಿಕೆ ಆರೋಪದ ಬಗ್ಗೆ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಕೆಂಡಮಂಡಲರಾಗಿದ್ದಾರೆ. ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ ಎದ್ದು ನಿಂತ ಮಂತ್ರಿಗಳು ತಮ್ಮ ವಿರುದ್ಧದ ಆರೋಪದ ಬಗ್ಗೆ ಯಾವುದೇ ರೀತಿಯ ಚರ್ಚೆ ಮತ್ತು ತನಿಖೆಗೆ ಸಿದ್ದ ಎಂದು ಘೋಷಿಸಿದರು.
ಶಾಸನಸಭೆಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ಆರೋಪ ಮಾಡಬೇಕಾದರೆ ಒಂದು ವಾರ ಮೊದಲು ನೋಟಿಸ್ ನೀಡಬೇಕು ಎಂಬ ನಿಯಮವಿದೆ ಆದರೆ ಈ ವಿಷಯದಲ್ಲಿ ಈಸಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವ್ಯಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.
ಮಂತ್ರಿ ಕೃಷ್ಣ ಬೈರೇಗೌಡ ಅವರು ಸ್ಮಶಾನ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪ ಮಾಡಿದ್ದಾರೆ ಈ ಆರೋಪದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಶೂನ್ಯ ವೇಳೆಯಲ್ಲಿ ಮನವಿ ಮಾಡಿದರು.
ಈ ವೇಳೆ ಸ್ವತಃ ಮಧ್ಯ ಪ್ರವೇಶಿಸಿದ ಕೃಷ್ಣ ಬೈರೇಗೌಡ ಅವರು, “ ಅಧಿವೇಶನದ ಸಂದರ್ಭದಲ್ಲಿ ಸದನದ ಯಾವುದೇ ಸದಸ್ಯರ ಬಗ್ಗೆ ಯಾವುದೇ ವ್ಯಯಕ್ತಿಕ ವಿಚಾರ ಪ್ರಸ್ತಾಪ ಮಾಡಬೇಕಿದ್ದರೆ ಅದಕ್ಕೊಂದು ನಿಯಮಾವಳಿ ಇದೆ. ಕನಿಷ್ಟ ವಾರಕ್ಕೂ ಮುಂಚೆಯೇ ಸದಸ್ಯರಿಗೆ ನೋಟೀಸ್ ನೀಡಬೇಕು. ಆದರೆ, ಈ ವಿಚಾರದಲ್ಲಿ ದಿಢೀರನೆ ಆರೋಪ ಮಾಡಿ ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ. ಆದರೂ ನಾನು ಸದನದ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಮೇಲಿನ ಆರೋಪದ ಬಗ್ಗೆ ಸದನದಲ್ಲಿ ಚರ್ಚಿಸಲು ಹಾಗೂ ಉತ್ತರ ನೀಡಲು ನನ್ನದೇನೂ ಅಭ್ಯಂತರ ಇಲ್ಲ. ಈ ವಿಚಾರ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು” ಎಂದರು.
ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇನ್ನೂ ಸಾಕಷ್ಟು ವಿಧೇಯಕಗಳು ಮಂಡನೆಗೆ ಬಾಕಿ ಇದ್ದು, ತದನಂತರ ಈ ವಿಚಾರವನ್ನು ಚರ್ಚಿಸಲು ಅವಕಾಶ ನೀಡುವುದಾಗಿ ತಿಳಿಸಿದರು.
Previous Articleನ್ಯಾಷನಲ್ ಹೆರಾಲ್ಡ್ ಪ್ರಕರಣ: ನಮಗೆ ನ್ಯಾಯ ಸಿಕ್ಕಿದೆ – ಡಿ.ಕೆ ಶಿವಕುಮಾರ್
Next Article ನಗರ ಸಭೆಗಳ ವಿರುದ್ಧ ಕ್ರಿಮಿನಲ್ ಕೇಸ್

