ಬೆಂಗಳೂರು – ವಿಧಾನಮಂಡಲದ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ನೇಮಕದ ಬಿಕ್ಕಟ್ಟಿನಿಂದ ತತ್ತರಿಸಿರುವ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಧಗೆ ಆವರಿಸಿದೆ. ಅದರಲ್ಲೂ ಬೆಳಗಾವಿ ಬಿಜೆಪಿಯ ಬಿಕ್ಕಟ್ಟು ವರಿಷ್ಠರಿಗೆ ಹೊಸ ತಲೆ ನೋವು ತಂದಿದೆ.
ಬೆಳಗಾವಿ ಬಿಜೆಪಿಯ ಬಹುತೇಕ ನಾಯಕರು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ಸಮರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಗೃಹ ಮಂತ್ರಿ ಅಮಿತ್ ಶಾ,ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಪತ್ರ ಬರೆದಿರುವ ಜಿಲ್ಲೆಯ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಅವರಿಗೆ ನೀಡುತ್ತಿರುವ ಪ್ರಾತಿನಿಧ್ಯ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಬಿಜೆಪಿಯ ಅನಭಿಷಕ್ತ ದೊರೆಯಂತೆ ವರ್ತಿಸುತ್ತಿದ್ದಾರೆ.ಯಾವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ,ಕಾರ್ಯಕರ್ತರ ಅಭಿಪ್ರಾಯಗಳಿಗೆ ಮಾನ್ಯತೆ ನೀಡುವುದಿಲ್ಲ.ತಾವು ಹೇಳಿದ್ದೇ ಆಗಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ತಮ್ಮ ಆಪ್ತ ವಲಯದಲ್ಲಿರುವರನ್ನು ಬಿಟ್ಟರೆ ಉಳಿದ ಯಾವ ನಾಯಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದು ಪಕ್ಷ ಸಂಘಟನೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.
ವಿಧಾನಸಭೆಗೆ ನಡೆದ Electionಯಲ್ಲಿ ರಮೇಶ ಜಾರಕಿಹೊಳಿ ಖುದ್ದಾಗಿ ಮುಂದೆ ಬಂದು ನಾಯಕತ್ವ ವಹಿಸಿಕೊಂಡರು. ಅವರ ಧೋರಣೆ ಜಿಲ್ಲೆಯ ಇತರ ನಾಯಕರು ಹಾಗೂ ಒಂದು ದೊಡ್ಡ ಸಮುದಾಯದ ಮುಖಂಡರಿಗೆ ಇಷ್ಟವಾಗಲಿಲ್ಲ. ಕಾರ್ಯಕರ್ತರಲ್ಲೂ ಗೊಂದಲಗಳು ಮೂಡಿದವು. ಹೀಗಾಗಿ, ಜಿಲ್ಲೆಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿಗೆ ಸೋಲಾಗಿದೆ. 13ರಷ್ಟಿದ್ದ ಬಿಜೆಪಿ ಶಾಸಕರ ಸಂಖ್ಯೆ ಈಗ 7ಕ್ಕೆ ಇಳಿದಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ ಇವರ ಚಟುವಟಿಕೆಗಳಿಗೆ ಈಗಲೇ ಕಡಿವಾಣ ಹಾಕಬೇಕು, ಅವರನ್ನು ಗೋಕಾಕ್ ವಿಧಾನಸಭೆ ಕ್ಷೇತ್ರಕ್ಕೆ ಸೀಮಿತಗೊಳಿಸಬೇಕು.ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಲು ಬಿಡಬಾರದು ಎಂದು ಮನವಿ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರೇ ನಾಯಕತ್ವ ವಹಿಸಿಕೊಳ್ಳುವ ಇರಾದೆ ಇದೆ. ಇದಕ್ಕೆ ಅವಕಾಶ ನೀಡಬಾರದು ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟ ಬಿಜೆಪಿಯಲ್ಲಿ, ರಮೇಶ ಜಾರಕಿಹೊಳಿ ಏಕಮಾತ್ರ ನಾಯಕ ಎಂಬಂತೆ ಬಿಂಬಿಸಿಕೊಂಡರು. ಇದನ್ನು ಕಾರ್ಯಕರ್ತರು ಒಪ್ಪಿಕೊಳ್ಳಲಿಲ್ಲ. ಮುಂದೆಯೂ ಲೋಕಸಭೆ ಚುನಾವಣೆ ಕಾಲಕ್ಕೆ ಇದೇ ರೀತಿಯ ಭಾವನೆ ಮೂಡಬಾರದು’ ಎಂದು ಕೆಲವರು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಅಥಣಿ, ಕಾಗವಾಡ, ಯಮಕನಮರಡಿ, ರಾಮದುರ್ಗ ಕ್ಷೇತ್ರಗಳಲ್ಲಿ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರನ್ನೇ ಕಣಕ್ಕಿಳಿಸಿದರು. ಅವರು ಟಿಕೆಟ್ ಕೊಡಿಸಿದ ಯಾವ ಅಭ್ಯರ್ಥಿಯೂ ಗೆಲ್ಲಲಿಲ್ಲ. ಅಲ್ಲದೇ, ಉಳಿದ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳಿಗೇ ಅಡ್ಡಗಾಲು ಹಾಕಿದರು ಎಂದು ಪತ್ರದಲ್ಲಿ ವಿವರಿಸಿರುವುದಾಗಿ ತಿಳಿದು ಬಂದಿದೆ ಸೋಲಿನಿಂದ ಕಂಗೆಟ್ಟು ಪ್ರತಿಪಕ್ಷ ನಾಯಕನ ಆಯ್ಕೆಗೆ ಒಮ್ಮತ ಮೂಡಿಸಲು ಪ್ರಯತ್ನ ನಡೆಸಿರುವ ಪಕ್ಷದಲ್ಲಿ ಜಾರಕಿಹೊಳಿ ಅವರ ಕುರಿತು ಉಂಟಾಗಿರುವ ವಿದ್ಯಮಾನ ಹೊಸ ಸಮಸ್ಯೆ ಹುಟ್ಟು ಹಾಕಿದೆ.