ಬೆಂಗಳೂರು,ಮೇ.29– ವಿರೋಧಿಗಳು ನೀಡಿದ ಮಾಹಿತಿಯಿಂದಾಗಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ನನ್ನ ಮನೆ ಕಚೇರಿ ಹಾಗೂ ನಿಕಟವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎ ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರು ತಿಳಿಸಿದ್ದಾರೆ.
ನನ್ನ ಒಡೆತನದ ಬಂಗಲೆ, ಕಚೇರಿ ಸೇರಿ 7 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆ ನಡೆಸಿದ ದಾಳಿಯು ಪೂರ್ಣಗೊಂಡ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 8 ಲಕ್ಷ 60 ಸಾವಿರ ರೂ 1 ಕೋಟಿ 70 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದರು.
ಇಡಿ ಅಧಿಕಾರಿಗಳು ಶೋಧನಾ ವಾರಂಟ್ ಸಮೇತ ಬಂದಿದ್ದರು. ನನ್ನ ವ್ಯವಹಾರಗಳು ಎಲ್ಲವೂ ಸರಿಯಾಗಿದ್ದು ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ದಾಖಲೆ ಸಮೇತ ದೆಹಲಿಗೆ ಬರುವಂತೆ ಇಡಿಯವರು ಹೇಳಿದ್ದಾರೆ, ಶಾಸಕ ಜಮೀರ್ ಅಹ್ಮದ್ ಅವರಿಗೆ 3 ಕೋಟಿ ರೂ. ಸಾಲ ನೀಡಿದ್ದು ಅವರ ಮನೆ ಮೇಲೆ ಇಡಿ ದಾಳಿ ನಡೆದಿತ್ತು.
ಈ ವೇಳೆ ನನ್ನ ಇಡಿ ವಿಚಾರಣೆಗೆ ಕರೆದಾಗ ಸಾಲದ ಬಗ್ಗೆ ಹೇಳಿದ್ದೆ. 2013ರಲ್ಲಿ ಜಮೀರ್ಗೆ ಸಾಲ ನೀಡಿದ ಬಗ್ಗೆ ಮಾಹಿತಿ ನೀಡಿದ್ದೆ. ಹಣ ವಾಪಸ್ ನೀಡಲು ಸಮಯ ಕೇಳಿದ್ದಾರೆ ಎಂದು ಹೇಳಿದ್ದೆ. ಈ ಬಗ್ಗೆ ನನಗೆ ಆಗ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಎಂಎಲ್ಸಿ ಚುನಾವಣೆ ಸ್ಪರ್ಧೆಗೂ ಮುನ್ನ ನೋಟಿಸ್ ನೀಡಿದ್ದರು.ಈಗ ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.
40ರಿಂದ50 ಆಸ್ತಿ:
ನಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದೇನೆ, ಕಾನೂನು ಬದ್ಧವಾಗಿಯೇ ಜಮೀನು ಖರೀದಿಸಿದ್ದೇನೆ. ಜಮೀನುಗಳ ಕುರಿತ ದಾಖಲಾತಿಗಳನ್ನು ಇಡಿ ಅವರಿಗೆ ನೀಡಿದ್ದೇನೆ. ತನ್ನ ಆಸ್ತಿಗೆ ಸಂಬಂಧಿಸಿದ ಎಲ್ಲಾ ತೆರಿಗೆ ಪಾವತಿಸಿದ್ದೇನೆ. ಇಡಿ ಅಧಿಕಾರಿಗಳ ಮನೆಯ ಎಲ್ಲಾ ಕಡೆ ಶೋಧ ನಡೆಸಿದ್ದಾರೆ. ಮನೆಯಲ್ಲಿ ಪತ್ತೆಯಾದ ನಗದು ಹಣ ವಾಪಸ್ ನೀಡಿದ್ದಾರೆ. ಮನೆಯಲ್ಲಿ ಪತ್ತೆಯಾದ ಚಿನ್ನಕ್ಕೆ ದಾಖಲೆ ನೀಡಲು ಹೇಳಿದ್ದಾರೆ. ನನ್ನ ಬಳಿ 40 ರಿಂದ 50 ಆಸ್ತಿಗಳಿವೆ.ಕಾನೂನುಬದ್ಧವಾಗಿಯೇ ಎಲ್ಲವನ್ನೂ ಖರೀದಿ ಮಾಡಿದ್ದೇನೆ ಎಂದು ಅಭಿಪ್ರಾಯಪಟ್ಟರು.
ಸಿಆರ್‌ಪಿಎಫ್ ಭದ್ರತೆ:
ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಗೆ ಕೆಲ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಾಬು ಒಡೆತನದ ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದ್ದಾರೆ. ಬೆಳಗ್ಗೆ 6.30ಕ್ಕೆ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡವು ದಾಳಿ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಭದ್ರತೆ ಪಡೆದಿದ್ದರು.
23 ಬ್ಯಾಂಕ್ ಖಾತೆ:
ಬಾಬು ಅವರ ಹಲವು ಕಡೆಗಳ ನೂರಾರು ಕೋಟಿ ರೂ. ಮೌಲ್ಯದ ಜಮೀನು, ನಿವೇಶನ, ಅಪಾರ್ಟ್‌ಮೆಂಟ್, ಕಟ್ಟಡಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಇಡಿ ಕೈ ಸೇರಿದೆ. ಮೊದಲ ಪತ್ನಿ ರುಕ್ಸಾನ, ಎರಡನೆ ಪತ್ನಿ ಶಾಜಿಯಾ, ಮಗಳು ಉಮ್ರಾ ಫರೀಫ್, ಮಗ ಅಫ್ನಾನ್ ಸೇರಿ ಕುಟುಂಬಸ್ಥರ ಹೆಸರಿನಲ್ಲಿ ಒಟ್ಟು 23 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಬಾಬು ತಮ್ಮ ಹೆಸರಿನಲ್ಲಿ 12 ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಕುಟುಂಬಸ್ಥರ ಖಾತೆಯಲ್ಲಿ 70 ಕೋಟಿಗೂ ಅಧಿಕ ಹಣ ಇರುವುದು ಇಡಿ ತನಿಖೆಯಲ್ಲಿ ತಿಳಿದು ಬಂದಿದೆ.