ದನ ಕಳವು ಪ್ರಕರಣದ ಮೂವರು ಆರೋಪಿಗಳನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ವೇಳೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದು, ಹಂಗು ತೊರೆದು ಆತನನ್ನ ಬೆನ್ನಟ್ಟಿದ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಆರೋಪಿಯನ್ನ ಹೆಡೆಮುರಿ ಕಟ್ಟಿದ ಘಟನೆ ದೇರಳಕಟ್ಟೆ ನಾಟೆಕಲ್ ಎಂಬಲ್ಲಿ ನಡೆದಿದೆ.
ದೇರಳಕಟ್ಟೆ ನಿವಾಸಿ ಮಹಮ್ಮದ್ ಮುಸ್ತಾಫ ಎಂಬಾತನೇ ಪೊಲೀಸರಿಂದ ಎಸ್ಕೇಪ್ ಆಗಲು ಯತ್ನಿಸಿ ಮತ್ತೆ ಕಾನ್ ಸ್ಟೇಬಲ್ ಕೈಗೆ ತಗಲಾಕ್ಕೊಂಡ ದನಕಳವು ಆರೋಪಿ. ಕೊಣಾಜೆ ಠಾಣಾ ಪೊಲೀಸ್ ಕಾನ್ಸ್ಟೇಬಲ್ ಎಮ್.ಬಿ ಅಸುಂಡಿ ಎಂಬವರು ತಮ್ಮ ಪ್ರಾಣದ ಹಂಗು ತೊರೆದು ದನಕಳವು ಆರೋಪಿ ಮುಸ್ತಾಫನನ್ನ ಹಿಡಿದು ಜೈಲಿಗಟ್ಟಿ ಸಮಯ ಪ್ರಜ್ನೆ ಮರೆದಿದ್ದು ನೆರೆದಿದ್ದವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂದು ಬೆಳಿಗ್ಗೆ ಕೊಣಾಜೆ ಠಾಣಾ ವ್ಯಾಪ್ತಿಯ ಚೇಳೂರು ಚೆಕ್ ಪೋಸ್ಟ್ ಬಳಿ ಪಿ.ಎಸ್.ಐ ಯೋಗೇಶ್ವರ್ ಮತ್ತು ಸಿಬ್ಬಂದಿಗಳು ಗಸ್ತಿನಲ್ಲಿದ್ದ ವೇಳೆ ಮೆಲ್ಕಾರ್ ನಿಂದ ಸಜಿಪ ಕಡೆಗೆ ಬರುತ್ತಿದ್ದ ಈಕೋ ಕಾರನ್ನ ತಡೆದಿದ್ದಾರೆ. ತಪಾಸಣೆ ನಡೆಸಿದಾಗ ಕಾರಲ್ಲಿ ಒಂದು ಹೆಣ್ಣು ಕರುವನ್ನ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ಆರೋಪಿಗಳಾದ ದೇರಳಕಟ್ಟೆ ನಿವಾಸಿ ಮಹಮ್ಮದ್ ಮುಸ್ತಾಫ, ಸಜಿಪ ನಿವಾಸಿ ಮುನಾಫರ್, ಕಲ್ಲಾಪು ನಿವಾಸಿಗಳಾದ ಮಹಮ್ಮದ್ ಜುನೈದ್ ನನ್ನ ಬಂಧಿಸಿದ್ದರು.
ಇಂದು ಮದ್ಯಾಹ್ನದ ವೇಳೆ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮುಂದಾದ ಪೊಲೀಸರು ಪಿ.ಸಿ.ಆರ್ ವಾಹನದಲ್ಲಿ ಮೂವರು ದನಕಳವು ಆರೋಪಿಗಳನ್ನ ನಾಟೆಕಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಕರೆ ತಂದಿದ್ದಾರೆ.ಈ ವೇಳೆ ಸಮೀಪದ ತಹಶೀಲ್ದಾರ್ ಕಛೇರಿಯಲ್ಲಿ ನೆರೆದಿದ್ದ ಜನರು ನೋಡ ನೋಡುತ್ತಿದ್ದಂತೆಯೇ ಮುಸ್ತಾಫ ಎಂಬಾತ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಗುಡ್ಡ ಹಾರಿ ತಪ್ಪಿಸಲು ಯತ್ನಿಸಿದ್ದು ಸ್ಥಳದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಎಮ್.ಬಿ ಅಸುಂಡಿ ಅವರು ಗುಡ್ಡದಲ್ಲಿ ಎದ್ದು ಬಿದ್ದು ಚೇಸ್ ಮಾಡಿ ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ.
ಘಟನೆಯಲ್ಲಿ ಆರೋಪಿಯನ್ನ ಚೇಸ್ ಮಾಡಿ ಹಿಡಿದ ಪೊಲೀಸ್ ಸಿಬ್ಬಂದಿ ಅಸುಂಡಿ ಅವರಿಗೆ ಗಾಯಗಳಾಗಿವೆ.