ಬೆಂಗಳೂರು – ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಗೆಲುವಿನ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಲೋಕಸಭಾ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂದು ಕಾರ್ಯ ಯೋಜನೆ ರೂಪಿಸಿರುವ ಕಾಂಗ್ರೆಸ್ ನಾಯಕರು ಇದೀಗ ಈ ಕ್ಷೇತ್ರದಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.
ಬಿಜೆಪಿ ಈ ಹಿಂದೆ ಒಕ್ಕಲಿಗ ಅಭ್ಯರ್ಥಿಯನ್ನು ಕ್ಷೇತ್ರದಿಂದ ಕಣಕ್ಕಿಳಿಸಿ ಯಶಸ್ಸು ಪಡೆದಿದೆ ಇದೇ ಮಾನದಂಡವನ್ನು ಪಾಲಿಸಲು ಇದೀಗ ಕಾಂಗ್ರೆಸ್ ಕೂಡ ಮುಂದಾಗಿದೆ.
ಬಿಜೆಪಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ ಮೈಸೂರು ರಾಜ ವಂಶಸ್ಥ ಯದುವೀರ್ ರವರಿಗೆ ಟಿಕೆಟ್ ಘೋಷಣೆ ಮಾಡಿದೆ ಇದರ ವಿರುದ್ಧ ಒಕ್ಕಲಿಗ ಸಮುದಾಯ ತೀವ್ರ ಅಸಮಾಧಾನಗೊಂಡಿದೆ ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.
ಅದರಲ್ಲೂ ಕಳೆದ ಕೆಲವಾರು ದಿನಗಳಿಂದ ಬಿಜೆಪಿ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ನಡೆಸುತ್ತಿರುವ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪಕ್ಷದ ವಕ್ತಾರರಾಗಿ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಲಕ್ಷ್ಮಣ್ ಉದ್ಯಮಿಯಾಗಿಯೂ ಈ ಗಮನ ಸೆಳೆದಿದ್ದಾರೆ ಮೈಸೂರು ಮಾತ್ರವಲ್ಲ ನೆರೆಯ ಕೊಡಗಿನಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿದಲ್ಲಿ ಯದುವೀರ್ ಅವರಿಗೆ ಪ್ರಬಲ ಪೈಪೋಟಿ ನೀಡಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.

