ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಅಖಾಡ ಸಂಪೂರ್ಣ ಸಜ್ಜುಗೊಂಡಿದೆ. ರಾಜ್ಯದ ಆಡಳಿತ ರೂಡ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಹಲವು ಸುತ್ತಿನಲ್ಲಿ ಸತತ ಸಮಾಲೋಚನೆ ಸಂಧಾನದ ಜೊತೆಗೆ ಸೋಲು ಗೆಲುವಿನ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿವೆ.
ಬಿ ಫಾರಂ ಪಡೆದಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ. ಆದರೆ ಇದರಲ್ಲಿ ಅನೇಕರು ಓಳೇಟಿನ ಆತಂಕದಲ್ಲಿ ಇದ್ದಾರೆ. ಸ್ವಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಚುನಾವಣೆಯಲ್ಲಿ ತಮ್ಮ ವಿರುದ್ಧದ ಕೆಲಸ ಮಾಡಬಹುದು ಎಂಬ ಆತಂಕದಲ್ಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಸರತ್ತು ನಡೆಸುತ್ತಿದ್ದಾರೆ.
ಚುನಾವಣೆ ಪ್ರಚಾರದ ಕಾವು ತೀವ್ರಗೊಳ್ಳುವ ಸಮಯದಲ್ಲಿ ಈ ಕಸರತ್ತು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ಅಭ್ಯರ್ಥಿಗಳ ಸೋಲು- ಗೆಲುವಿನ ಹಣೆಬರಹ ನಿರ್ಧಾರವಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಂತಹ ಓಳೇಟಿನ ಆತಂಕದಲ್ಲೇ ಚುನಾವಣೆ ಎದುರಿಸುತ್ತಿದ್ದಾರೆ.
ಇದು ಒಂದು ಕಡೆಯಾದರೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಬಂಡಾಯದ ಬಿಸಿ ಸದ್ಯಕ್ಕೆ ತಣ್ಣಗಿರುವಂತೆ ಕಾಣಿಸಿದರೂ ಕೂಡ ಇದು ಬೂದಿ ಮುಚ್ಚಿದ ಕೆಂಡವಾಗಿದ್ದು ಯಾವ ಕ್ಷಣ ದಲ್ಲಾದರೂ ದಳ್ಳುರಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಬಿಜೆಪಿಯಲ್ಲಿ ಧಗೆ:
ಈ ಬಾರಿ ಅತ್ಯಧಿಕ ಸ್ಥಾನ ಇದೆಲ್ಲ ಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಭಿನ್ನಮತದ ಧಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೈಕಮಾಂಡ್ ಸೂಚನೆಯ ಮೇರೆಗೆ ಬಂಡಾಯ ಶಮನದ ಅಖಾಡಕ್ಕೆ ಧುಮುಕಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಹೊರತುಪಡಿಸಿ ಉಳಿದ ಕಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಸಾರಿರುವ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.
ಯಡಿಯೂರಪ್ಪ ಅವರು ನಡೆಸಿದ ಸಂದಾನದ ಪರಿಣಾಮವಾಗಿ ತುಮಕೂರು ದಾವಣಗೆರೆ ಬೆಳಗಾವಿ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಂಡಾಯ ಶಮನಗೊಂಡಿದೆ ಎಂಬಂತೆ ಕಾಣುತ್ತಿದೆಯಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು ಯಾವುದೇ ಸಮಯದಲ್ಲೂ ಧಗಧಗಿಸಬಹುದಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಮಾಧುಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದು,ಯಡಿಯೂರಪ್ಪ ಅವರು ನೀಡಿದ ಸಲಹೆಗೆ ಸಮ್ಮತಿಸಿದ ಮಾಧುಸ್ವಾಮಿ ಬಂಡಾಯದ ಬಾವುಟ ಇಳಿಸಿದ್ದರಾದರು ಚುನಾವಣೆಯಲ್ಲಿ ಸೋಮಣ್ಣ ಪರ ಕೆಲಸ ಮಾಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇವರಷ್ಟೇ ಅಲ್ಲದೆ ಇನ್ನೂ ಅನೇಕ ಮಂದಿ ಕಾರ್ಯಕರ್ತರು ಸೋಮಣ್ಣ ಪರವಾಗಿ ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತಿಲ್ಲ ಎನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬಂಡಾಯ ಶಮನಗೊಳಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸಭೆ ಕರೆದು ವಿಫಲರಾಗಿದ್ದ ಯಡಿಯೂರಪ್ಪ ಅವರು ದಾವಣಗೆರೆಗೆ ತೆರಳಿ ಎಲ್ಲ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.
ಪಕ್ಷದ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಅವರ ಪತ್ನಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆ ಹಾಕಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಬಣ ಇದೀಗ ತಮ್ಮ ನಿಲುವು ಬದಲಾಯಿಸಿದೆ. ಯಡಿಯೂರಪ್ಪ ಅವರು ನೀಡಿದ ಸಲಹೆಗೆ ಸಮ್ಮತಿಸಿದ ಈ ಬಣ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಹೆಸರು ಹೇಳಿ ಮತಯಾಚಿಸುವುದಿಲ್ಲ ಮೊದಲಿಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಪರವಾಗಿ ಮತಯಾಚಿಸುತ್ತೇವೆ ಎಂದು ತಿಳಿಸಿದೆ.
ಆದರೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಈ ವಿಷಯವಾಗಿ ಏನನ್ನು ಹೇಳದಿರುವುದು ಇನ್ನು ಬಿಕ್ಕಟ್ಟು ಶಮನಗೊಂಡಿಲ್ಲ ಎಂಬುದರ ಸಂಕೇತವಾಗಿದೆ.
ಕೊಪ್ಪಳದಲ್ಲಿ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಅವರು ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ನಾಯಕರ ಸಂವಿಧಾನಕ್ಕೆ ಮಣಿದಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಲ್ಲವೇ ಪಕ್ಷಾಂತರ ಮಾಡುವ ನಿರ್ಧಾರ ಕೈ ಬಿಟ್ಟಿದ್ದಾರೆ ಆದರೆ ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂಬ ಆಹ್ವಾನವನ್ನು ತಿರಸ್ಕರಿಸಿರುವುದು ಚುನಾವಣೆಯಲ್ಲಿ ಅವರು ತಟಸ್ಥ ನಿಲುವು ತಳಯಬಹುದು ಎಂಬ ಸಂದೇಹ ಉಂಟುಮಾಡಿದೆ.
ರಾಯಚೂರಿನಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಸಂಸದ ಬಿ ವಿ ನಾಯಕ್ ಅವರು ಪಕ್ಷಾಂತರ ಮಾಡುವ ನಿರ್ಧಾರ ಕೈ ಬಿಟ್ಟಿದ್ದು ಇದೀಗ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆ ಅಲ್ಲವೇ ತಮ್ಮ ಬೆಂಬಲಿಗರಿಗೆ ತಮಗೆ ಸೂಕ್ತವೆನಿಸುವ ತೀರ್ಮಾನ ಕೈಗೊಳ್ಳುವಂತೆ ಹೇಳಿರುವುದು ಬಿಜೆಪಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟು ಶಮನಗೊಳಿಸಲು ಹಲವು ಸುತ್ತಿನ ಸಭೆ ನಡೆಸಿ ಕೊಂಚಮಟ್ಟಿಗೆ ಯಶಸ್ಸು ಸಾಧಿಸಿರುವ ಯಡಿಯೂರಪ್ಪ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಅವರ ಸಭೆಯಿಂದ ದೂರ ಉಳಿದಿದ್ದು ಹಾಗೂ ಮಾಜಿ ಸಂಸದ ಪ್ರಭಾಕರ ಕೋರೆ ಅವರು ಯಡಿಯೂರಪ್ಪ ಅವರ ಸಲಹೆಯನ್ನು ತಿರಸ್ಕರಿಸಿರುವುದು ಗೊಂದಲ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತ ಸಿದ್ದ ಎಂದಿರುವ ಮಾಜಿ ಸಚಿವ ಈಶ್ವರಪ್ಪ ಅವರ ಜೊತೆ ಬಿಜೆಪಿ ಸದ್ಯಕ್ಕೆ ಯಾವುದೇ ರೀತಿಯ ಮಾತುಕತೆ ನಡೆಸದಿರಲು ತೀರ್ಮಾನಿಸಿದೆ ಹೀಗಾಗಿ ಈ ಬಂಡಾಯ ದಿನಗಳಂತೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಚಿತ್ರದುರ್ಗ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಗೋವಿಂದ ಕಾರಜೋಳ ವಿರುದ್ಧ ಶಾಸಕ ಚಂದ್ರಪ್ಪ ಸಾರಿರುವ ಬಂಡಾಯ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶೇಷವೆಂದರೆ ಅಧಿಕೃತ ಅಭ್ಯರ್ಥಿ ಮತ್ತು ಬಂಡಾಯ ಸರಾರಿರುವ ನಾಯಕ ಇಬ್ಬರೂ ಕೂಡ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಕ್ಷೇತ್ರದ ಬಿಕ್ಕಟ್ಟು ಶಮನ ಧರ್ಮ ಸಂಕಟ ತಂದೊಡ್ಡಿದೆ. ಹಿರಿಯ ನಾಯಕರ ಸಂಧಾನದ ಮಾತುಗಳಿಗೆ ಸೊಪ್ಪು ಹಾಕದ ಚಂದ್ರಪ್ಪ ತಮ್ಮ ಪುತ್ರ ರಘು ಚಂದನ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಇದಕ್ಕೆ ಪ್ರತಿಯಾಗಿ ಅಧಿಕೃತ ಅಭ್ಯರ್ಥಿ ಗೋವಿಂದ ಕಾರಜೋಳ ಬಣ ಈ ಚುನಾವಣೆಯಲ್ಲಿ ಚಂದ್ರಪ್ಪ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸುತ್ತಿರುವುದು ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ ಇದು ಚುನಾವಣೆಯ ಮೇಲೆ ಗಂಭೀರ ಸ್ವರೂಪ ಬೀರುವ ಎಲ್ಲಾ ಲಕ್ಷಣಗಳು ಇವೆ.
ಕಾರವಾರ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾವೇ ಸ್ವತಃ ಬಂಡಾಯ ಶಮನದ ಅಖಾಡಕ್ಕೆ ಇಳಿದಿದ್ದಾರೆ . ಸಂಘ ಪರಿವಾರದ ನಾಯಕರೊಂದಿಗೆ ಸತತ ಮಾತುಕತೆ ನಡೆಸುತ್ತಾ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಅವರ ಆಪ್ತರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಆದರೆ ವಿಶ್ವೇಶ್ವರ ಹೆಗಡೆ ಅವರ ಜೊತೆ ಮಾತುಕತೆ ನಡೆಸಲು ಅನಂತಕುಮಾರ್ ಹೆಗಡೆ ನಿರಾಕರಿಸಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ಇಲ್ಲಿ ಈ ಯಡಿಯೂರಪ್ಪ ಯಾವುದೇ ಕಮಾಲ್ ಮಾಡಲು ಸಾಧ್ಯವಿಲ್ಲ ಆರ್ ಆರ್.ಎಸ್ ನ ಉನ್ನತ ನಾಯಕರು ಮಧ್ಯಪ್ರವೇಶಿಸಿದರೆ ಮಾತ್ರ ಇಲ್ಲಿನ ಬಿಕ್ಕಟ್ಟು ಬಗೆಹರಿಸಲು ಸಾಧ್ಯ.
ಕಾಂಗ್ರೆಸಿನಲ್ಲಿ ಗುಪ್ತ್ ಗುಪ್ತ್:
ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಬಿನ್ನಮತ ಶಮನದ ಅಖಾಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಟಿಕೆಟ್ ವಂಚಿತ ಆಕಾಂಕ್ಷಿಗಳನ್ನು ಕರೆದು ಅವರ ಜೊತೆ ಸತತ ಸಮಾಲೋಚನೆ ನಡೆಸುವ ಮೂಲಕ ಹಲವು ಆಹ್ವಾನಗಳನ್ನು ನೀಡಿದ್ದಾರೆ ಇದಕ್ಕೆ ಸಮ್ಮತಿಸಿ ಕೆಲವರು ತಮ್ಮ ಬಿಗೀಪಟ್ಟು ಸಡಿಲಿಸಿದ್ದಾರೆ. ಆದರೆ ಇವರು ಚುನಾವಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಲಿದ್ದಾರೆ ಎಂಬ ಬಗ್ಗೆ ಸ್ವತಃ ಸಂತಾನದ ನೇತೃತ್ವ ವಹಿಸಿರುವ ಇಬ್ಬರೂ ನಾಯಕರಿಗೆ ತಮ್ಮದೇ ಆದ ಅನುಮಾನಗಳಿವೆ.
ಪ್ರಮುಖವಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಉಂಟಾಗಿರುವ ಬಿಗ್ಗಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎರಡನೇ ಬಾರಿ ಈ ಕ್ಷೇತ್ರದಿಂದ ಕಣಕ್ಕಿಳಿಯಲು ಪೈಪೋಟಿ ನಡೆಸಿದ್ದ ವೀಣಾ ಕಾಶಪ್ಪನವರ್ ಸಂಧಾನದ ಮಾತುಕತೆಗಳಿಗೆ ಹಾಜರಾದರೂ ನಾಯಕರು ನೀಡಿರುವ ಸಲಹೆಗಳನ್ನು ಒಪ್ಪಿಲ್ಲ.
ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದರು ಅದನ್ನು ಒಪ್ಪಿಕೊಳ್ಳಲು ವೀಣಾ ಕಾಶಪ್ಪನವರ್ ನಿರಾಕರಿಸಿದ್ದಾರೆ ಅಷ್ಟೇ ಅಲ್ಲ ಪಕ್ಷದ ಇತರೆ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು ಬೆಂಬಲಿಗರ ಜೊತೆ ಸತತ ಸಮಾಲೋಚನೆ ನಡೆಸುತ್ತಿದ್ದಾರೆ ಇದು ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯವಂತಿಲ್ಲ.
ಬೀದರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ರಾಜಶೇಖರ ಪಾಟೀಲ್ ಹುಮ್ನಾಬಾದ್ ತಮ್ಮ ಬಂಡಾಯವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿದ್ದಾರೆ. ಅಂತಿಮ ಕ್ಷಣಗಳಲ್ಲಿ ಇವರು ಬಿಜೆಪಿಗೆ ಪಕ್ಷಾಂತರ ಮಾಡುವ ಸಾಧ್ಯತೆಯಿದ್ದು ಇದು ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ದೊಡ್ಡ ಪರಿಣಾಮ ಬೀರುವುದು ಸ್ಪಷ್ಟ.
ಚಿಕ್ಕಬಳ್ಳಾಪುರ ಅಭ್ಯರ್ಥಿ ಆಯ್ಕೆ ಬಗ್ಗೆ ಕ್ಷೇತ್ರದ ಹಲವು ಶಾಸಕರು ಸಮಾಧಾನ ಹೊಂದಿಲ್ಲ. ತಮ್ಮ ಅಭಿಪ್ರಾಯಗಳನ್ನು ಬದಿಗೊತ್ತಿ ಮುಖ್ಯಮಂತ್ರಿ ಇಲ್ಲಿ ತೆಗೆದುಕೊಂಡಿರುವ ನಿರ್ಧಾರ ಅನೇಕರ ಬೇಸರಕ್ಕೆ ಕಾರಣವಾಗಿದೆ. ಗೌರಿಬಿದನೂರು ಕ್ಷೇತ್ರದ ಮಾಜಿ ಶಾಸಕ ಶಿವಶಂಕರರೆಡ್ಡಿ ಪಕ್ಷ ಬಿಡಲು ಸಜ್ಜಾಗಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ನಡೆದ ಕಸರತ್ತು ಕಾಂಗ್ರೆಸ್ಸಿನಲ್ಲಿರುವ ಬಣ ರಾಜಕಾರಣವನ್ನು ಜಗ ಜ್ಜಾಹೀರು ಮಾಡಿತು. ಮಾಜಿ ಸಚಿವ ರಮೇಶ್ ಕುಮಾರ್ ಅವರ ಬಣ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕತ್ವ ಕೈಗೊಂಡಿರುವ ತೀರ್ಮಾನವನ್ನು ಬೆಂಬಲಿಸಿದೆಯಾದರೂ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಇನ್ನೂ ಮುಗುಮ್ ಆಗಿಯೇ ಇರುವುದು ಪಕ್ಷದ ಅಭ್ಯರ್ಥಿಯ ಫಲಿತಾಂಶದ ಮೇಲೆ ದೊಡ್ಡ ಪರಿಣಾಮವನ್ನು ಬೀರಲಿದೆ.
ನಾಪತ್ತೆಯಾದ ಜೆಡಿಎಸ್:
ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹ ಸಮಸ್ಯೆ ಕಾಡುತ್ತಿದೆಯಾದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ಇನ್ನೊಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಪಕ್ಷದ ಸಂಘಟನೆ ಪ್ರಬಲವಾಗಿರುವ ತುಮಕೂರು ಚಿಕ್ಕಬಳ್ಳಾಪುರ ವಿಜಯಪುರ ರಾಯಚೂರು ಚಿತ್ರದುರ್ಗ ಮೈಸೂರು ಚಾಮರಾಜನಗರ ಲೋಕಸಭೆ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
ಮೇಲ್ಮಟ್ಟದಲ್ಲಿ ನಾಯಕರ ನಡುವೆ ಉತ್ತಮ ರೀತಿಯ ಹೊಂದಾಣಿಕೆ ಕಂಡುಬರುತ್ತಿದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿಯ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರಸ್ವಾಮಿ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಅವರನ್ನು ಭೇಟಿ ಮಾಡಿ ತಮ್ಮ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಬರುವಂತೆ ಮನವಿ ಮಾಡುತ್ತಿದ್ದಾರೆ ಅದರಲ್ಲೂ ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಚಾಮರಾಜನಗರ, ಉಡುಪಿ -ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ, ಮತ್ತು ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿಗಳು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಾವು ಒಂದೆರಡು ಬಾರಿ ತಮ್ಮ ಕ್ಷೇತ್ರದಲ್ಲಿ ರೋಡ್ ಶೋ ನಡೆಸಬೇಕು ಇದರಿಂದ ತಮ್ಮ ಗೆಲುವಿಗೆ ದೊಡ್ಡ ಪ್ರಮಾಣದಲ್ಲಿ ಸಹಕಾರ ಸಿಗಲಿದೆ ಎಂದು ಮನವಿ ಮಾಡಿದ್ದಾರೆ.
ನಾಯಕರ ಮಟ್ಟದಲ್ಲಿ ಈ ರೀತಿಯ ಮಾತುಕತೆ ಮತ್ತು ಸೌಹಾರ್ದ ವಾತಾವರಣ ಕಂಡುಬರುತ್ತಿದೆ ಆದರೆ ಕೆಳ ಹಂತದ ಕಾರ್ಯಕರ್ತರಲ್ಲಿ ಇಂತಹ ವಾತಾವರಣ ಇಲ್ಲವೇ ಇಲ್ಲ ಎನ್ನಬಹುದು. ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಆದ ನಾಯಕರು ಮತ್ತು ಕಾರ್ಯಕರ್ತರ ಪಡೆಯೊಂದಿಗೆ ಪ್ರಚಾರದಲ್ಲಿ ನಿರತರಾಗಿದ್ದಾರೆ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಇವರ ಪ್ರಚಾರ ಸಭೆಗಳ ಬಗ್ಗೆ ಮಾಹಿತಿಯ ಲಭಿಸುತ್ತಿಲ್ಲ ಪಕ್ಷದ ಪ್ರಚಾರ ಸಭೆಗಳಿಗೆ ಜೆಡಿಎಸ್ ಕಾರ್ಯಕರ್ತರಿಗೆ ಆಟ ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಹ್ವಾನ ನೀಡಲಾಗುತ್ತಿದೆ. ಇದು ಅನೇಕ ಜೆ ಡಿ ಎಸ್ ನಾಯಕರನ್ನು ಮುಜುಗಾರಕ್ಕೆ ಸಿಲುಕುವಂತೆ ಮಾಡುತ್ತಿದೆ. ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಮೂಡಿಸುವ ದೃಷ್ಟಿಯಿಂದ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ ಆದರೂ ಅದು ನಿರೀಕ್ಷಿತ ಮಟ್ಟದ ಫಲಿತಾಂಶ ನೀಡುತ್ತಿಲ್ಲ ಹೀಗಾಗಿ ಒಟ್ಟಾರೆ ಲೋಕಸಭಾ ಅಖಾಡದಲ್ಲಿ ಎಲ್ಲ ಕಡೆ ಗೊಂದಲ ಓಳೇಟಿನ ಭಯ, ಭಿನ್ನಮತದ ಧಗೆ ಕಾಣಿಸುತ್ತಿದ್ದು ಮುಂದಿನವಾರದ ನಂತರ ಇದು ಪಡೆಯಬಹುದಾದ ತಿರುವು ಪಕ್ಷಗಳ ಸೋಲು ಗೆಲುವಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
3 Comments
необычные идеи для бизнеса необычные идеи для бизнеса .
Селектор
https://emergency.spb.ru/pages/turniru_v_kazino_vavada__kak_uchastvovat_i_vuigruvat.html