ಬೆಂಗಳೂರು, ಆ. 08- ಮುಂಬರುವ ಲೋಕಸಭಾ Electionಯಲ್ಲಿ ರಾಜ್ಯದಿಂದ ಈ ಬಾರಿ ಅತ್ಯಧಿಕ ಸಂಖ್ಯೆಯ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಹೈಕಮಾಂಡ್ ತಾಕೀತು ಮಾಡಿದ್ದು ಅದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಮಂತ್ರಿಗಳು ಮತ್ತು ಶಾಸಕರಿಗೆ ಸೂಚಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ತಮ್ಮ ಅಭಿಪ್ರಾಯಗಳಿಗೆ ಮಂತ್ರಿಗಳು ಮನ್ನಣೆ ನೀಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾವಾರು ಶಾಸಕ ಸಚಿವರ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗಳು ಚುನಾವಣಾ ತಯಾರಿಗೆ ಆದ್ಯತೆ ನೀಡಿದ್ದಾರೆ.
ಬೆಳಗಾವಿ, ರಾಯಚೂರು, ಕೊಪ್ಪಳ ಕಲಬುರ್ಗಿ ಹಾವೇರಿ ಜಿಲ್ಲೆಗಳ ಶಾಸಕ ಸಚಿವರೊಂದಿಗೆ ಸಭೆ ನಡೆಸಿದ ಅವರು ಇನ್ನೊಂದು ವಾರದಲ್ಲಿ ಲೋಕಸಭೆಯ ಅಭ್ಯರ್ಥಿ ಆಯ್ಕೆ ಅಂತಿಮ ಗೊಳಿಸುವಂತೆ ಸೂಚಿಸಿದ್ದಾರೆ.
ಈ ಹಿಂದೆ ಬೆಳಗಾವಿ ಚಿಕ್ಕೋಡಿ, ಕೊಪ್ಪಳ ಕಲಬುರ್ಗಿ ಮತ್ತು ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದರು ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸೇರಿದಂತೆ ಹಲವು ಗೊಂದಲಗಳಿಂದಾಗಿ ಈ ಕ್ಷೇತ್ರಗಳು ಬಿಜೆಪಿಯ ಪಾಲಾಗಿವೆ. ಇವು ಈ ಬಾರಿ ಮತ್ತೆ ಕಾಂಗ್ರೆಸ್ ನ ತೆಕ್ಕೆಗೆ ಬರಬೇಕು ಎಂದು ಹೇಳಿದ್ದಾರೆ.
ಬೆಳಗಾವಿ ಚಿಕ್ಕೋಡಿ ಮತ್ತು ಧಾರವಾಡ ಕ್ಷೇತ್ರದಿಂದ ಮಂತ್ರಿಗಳೇ ಕಣಕ್ಕಿಳಿಯುವ ಪರಿಸ್ಥಿತಿ ಬರಬಹುದು ಅದಕ್ಕೂ ಕೆಲವರು ಸಿದ್ಧರಿರಬೇಕು ಎಂದು ಹೇಳಿದ ಮುಖ್ಯಮಂತ್ರಿಗಳು ಇದನ್ನು ಹೊರತುಪಡಿಸಿ ಗೆಲ್ಲುವ ಅವಕಾಶವಿರುವ ವ್ಯಕ್ತಿಯನ್ನು ಹುಡುಕಿ ಅಭ್ಯರ್ಥಿಯೆಂದು ಬಿಂಬಿಸುವ ಮೂಲಕ ಈಗಿನಿಂದಲೇ ಚುನಾವಣೆಗೆ ತಯಾರಿ ಆರಂಭಿಸಬೇಕು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಬೆಳಗಾವಿ ಜಿಲ್ಲೆಯ ಶಾಸಕರು ಕ್ಷೇತ್ರದಲ್ಲಿನ ಹಲವು ಅಭಿವೃದ್ಧಿ ಯೋಜನೆಗಳು ಬಾಕಿ ಉಳಿದಿರುವ ನೀರಾವರಿ ಕಾಮಗಾರಿಗಳು ಮತ್ತು ರಸ್ತೆಯ ದುರಸ್ತಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿರುವುದಾಗಿ ಗೊತ್ತಾಗಿದೆ. ಗೃಹ ,ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಇಲಾಖೆಯ ವರ್ಗಾವಣೆಯಲ್ಲಿ ತಮ್ಮ ಪತ್ರಗಳಿಗೆ ಮಂತ್ರಿಗಳು ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ ನಾವು ಮಾಡಿದ ಶಿಫಾರಸುಗಳನ್ನು ಪರಿಗಣನೆ ಗೆ ತೆಗೆದುಕೊಂಡಿಲ್ಲ ಎಂದು ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳು ಲಕ್ಷಾಂತರ ರೂಪಾಯಿ ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿವೆ ಶಾಸಕರ ಸೂಚನೆಗಳಿಗೆ ಈ ಕಾರ್ಖಾನೆಗಳು ಯಾವುದೇ ಮಾನ್ಯತೆ ನೀಡುತ್ತಿಲ್ಲ ಕಬ್ಬು ಬೆಳೆಗಾರರು ಶಾಸಕರ ಕಛೇರಿ ಮತ್ತು ಮನೆಗಳಿಗೆ ಭೇಟಿ ನೀಡಿ ಬಾಕಿ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ ಇದನ್ನು ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಖಾಸಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಭಾರಿ ಪ್ರಮಾಣದ ಮೋಸ ಮಾಡುತ್ತಿವೆ ಈ ಹಿನ್ನೆಲೆಯಲ್ಲಿ ಸಹಕಾರ ಅಥವಾ ಸಕ್ಕರೆ ಇಲಾಖೆಯಿಂದಲೇ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದ ಯಂತ್ರಗಳನ್ನು ಅಳವಡಿಸಿ ಅವುಗಳನ್ನ ನಿರ್ವಹಣೆ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆ ಎದುರಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ ಆದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರನ್ನು ಇದಕ್ಕಾಗಿ ಸಜ್ಜುಗೊಳಿಸಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅಧಿಕಾರ ನೀಡುವ ಮೂಲಕ ಅವರಿಗೆ ಇದು ಕಾಂಗ್ರೆಸ್ ಪಕ್ಷದ ಸರ್ಕಾರ ಎಂಬ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಒಟ್ಟಾಗಿ ಕುಳಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸರ್ಕಾರ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು ಜೊತೆಗೆ ಹೊಸದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.