ಬೆಂಗಳೂರು,ಡಿ.20-ಭಾರತ ಮತ್ತು ಶ್ರೀಲಂಕಾದಲ್ಲಿ ಎಲ್ಟಿಟಿಇ ಬೆಂಬಲಿಗರಿಗೆ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾದಳ(ಎನ್ ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ತಿರುಚಿಯ ಶ್ರೀಲಂಕಾ ಕ್ಯಾಂಪ್ನಿಂದ ಗುಣಶೇಖರನ್, ಪುಷ್ಪರಾಜನ್, ಮೊಹಮ್ಮದ್ ಆಸ್ಮಿನ್, ಅಲಹಪ್ಪೆ ಮುರುಗ ಸುನಿಲ್ ಗಾಮಿನಿ, ಸ್ಟ್ಯಾನ್ಲಿ ಕೆನಡಿ ಫರ್ನಾಂಡೊ, ಲಡಿಯಾ ಚಂದ್ರಸೇನ, ಧನುಕ್ಕಾ ರೋಷನ್, ವೆಲ್ಲ ಸುರಂಕ, ತಿಲಿಪ್ಪನ್ ಬಂಧಿತ ಆರೋಪಿಗಳಾಗಿದ್ದಾರೆ.
ಗುಣಶೇಖರನ್ ಹಾಗೂ ಪುಷ್ಪರಾಜನ್ ದಂಧೆಯ ಕಿಂಗ್ ಪಿನ್ಗಳಾಗಿದ್ದು, ಪಾಕಿಸ್ತಾನ ಮೂಲದ ಹಾಜಿ ಸಲೀಂ ಜೊತೆ ಸೇರಿ ಭಾರತ ಹಾಗೂ ಶ್ರೀಲಂಕಾದಲ್ಲಿ ಮಾದಕ ದಂಧೆಯ ವ್ಯವಹಾರ ನಡೆಸುತ್ತಿದ್ದರು. ಬಂಧಿತ ಅಲಹಪ್ಪೆ ಮುರುಗ ಸುನೀಲ್ ಗಾಮಿನಿ ಬೆಂಗಳೂರಿನ ಹೆಚ್ಎಸ್ಆರ್ ಲೇಔಟಿನ ಮನೆಯೊಂದರಲ್ಲಿ ವಾಸವಾಗಿದ್ದ.
ಕಳೆದ ಜುಲೈನಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ನಗರಗಳಿಗೆ ಆರೋಪಿಗಳು ಮಾದಕ ಪದಾರ್ಥಗಳನ್ನ ಸರಬರಾಜು ಮಾಡಿರುವ ಶಂಕೆಯಿದ್ದು ವಿಚಾರಣೆ ಮುಂದುವರೆದಿದೆ.