ಬೆಳಗಾವಿ, ಜ.3- ಅಂಗನವಾಡಿಯ (Anganwadi) ಮಕ್ಕಳು ಹೂ ಕಿತ್ತುಕೊಂಡರು ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಅಂಗನವಾಡಿ ಸಹಾಯಕಿಯ ಮೂಗನ್ನೇ ಕತ್ತರಿಸಿರುವ ಅಮಾನವೀಯ ಘಟನೆ ಬೆಳಗಾವಿ ಹೊರವಲಯದ ಬಸುರ್ತೆ ಗ್ರಾಮದಲ್ಲಿ ನಡೆದಿದೆ.
ಸುಗಂಧಾ ಮೋರೆ (50) ಹಲ್ಲೆಗೊಳಗಾದ ಅಂಗನವಾಡಿ ಸಹಾಯಕಿ. ಮನೆ ಮಾಲೀಕ ಕಲ್ಯಾಣಿ ಮೋರೆ ಮೂಗು ಕತ್ತರಿಸಿರುವ ಆರೋಪಿ. ಗಂಭೀರವಾಗಿ ಗಾಯಗೊಂಡಿರುವ ಸುಗಂಧಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗನವಾಡಿ (Anganwadi) ಮಕ್ಕಳು ಪಕ್ಕದ ಮನೆಯ ಮುಂದೆ ಬೆಳೆದಿದ್ದ ಹೂ ಕಿತ್ತರು ಎಂಬ ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಸಹಾಯಕಿಗೆ ಅವಾಚ್ಯವಾಗಿ ನಿಂದಿಸಿ, ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜ.1 ರಂದು ಅಂಗನವಾಡಿ ಕೇಂದ್ರದ ಮುಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಗು ಕತ್ತರಿಸಿರುವ ಹಿನ್ನೆಲೆ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಸುಗಂಧಾ ಅವರ ಪತಿ ವಿಶೇಷಚೇತನರಾಗಿದ್ದು, ಅಂಗನವಾಡಿ ಸಹಾಯಕಿಯಾಗಿ ಜೀವನದ ಬಂಡಿ ಸಾಗಿಸುತ್ತಿದ್ದರು. ಮಾರಣಾಂತಿಕ ಹಲ್ಲೆಯಿಂದ ಸುಗಂಧಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ