ಬೆಂಗಳೂರು, ಜ.17- ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದ ಶೌಚಾಲಯದಲ್ಲಿ ಸಿಲುಕಿ ಪ್ರಯಾಣಿಕ ಪರದಾಡಿದ ಘಟನೆ ಇಂದು ಮುಂಜಾನೆ ನಡೆದಿದೆ.
ಮುಂಬೈನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬರುತ್ತಿದ್ದ ಪ್ರಯಾಣಿಕನೋರ್ವ ಶೌಚಾಲಯದಲ್ಲಿ ಸಿಲುಕಿಕೊಂಡಿದ್ದು,ಒಂದು ಗಂಟೆಗಳ ಕಾರ್ಯಾಚರಣೆ ನಂತರ ಹರಸಾಹಸಪಟ್ಟು ಶೌಚಾಲಯದ ಬಾಗಿಲು ತೆರೆಯಲಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಶೌಚಾಲಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರಯಾಣಿಕ ಬಾಗಿಲು ತೆಗೆಯುತ್ತಿದ್ದಂತೆ ನಿಟ್ಟುಸಿರುಬಿಟ್ಟಿದ್ದಾರೆ.
ಇನ್ನು ಈ ಕಾರ್ಯಾಚರಣೆ ವೇಳೆ ಶೌಚಾಲಯದಲ್ಲಿ ಸಿಲುಕಿದ್ದ ಪ್ರಯಾಣಿಕನಿಗೆ ಧೈರ್ಯ ತುಂಬಲು ಗಗನಸಖಿ ಪತ್ರ ಬರೆದಿದ್ದು ಶ್ಲಾಘನೀಯವಾಗಿತ್ತು.
ಕಳೆದ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಬರಲು ಪ್ರಯಾಣಿಕನೋರ್ವ ಸ್ಪೈಸ್ ಜೆಟ್ ವಿಮಾನ ಹತ್ತಿದ್ದು ಪ್ರಯಾಣದ ವೇಳೆ ಶೌಚಾಲಯಕ್ಕೆ ಹೋಗಿ ಹಿಂದಿರುಗುವಾಗ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ.ಇದರಿಂದ ಬೆಚ್ಚಿಬಿದ್ದ ಪ್ರಯಾಣಿಕ ಗಾಬರಿಗೊಂಡು ಕಾಪಾಡುವಂತೆ ಕಿರುಚಾಡಿದ್ದಾರೆ. ಪ್ರಯಾಣಿಕನ ಪರದಾಟ ಕಂಡು ವಿಮಾನ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿ ಬಾಗಿಲು ತೆರೆಯಲು ಹರಸಾಹಸಪಟ್ಟಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಬಾಗಿಲು ತೆಗೆಯಲು ಆಗದಿದ್ದಾಗ ಶೌಚಾಲಯದಲ್ಲಿದ್ದ ಪ್ರಯಾಣಿಕ ಮತ್ತಷ್ಟು ಗಾಬರಿಗೊಂಡಿದ್ದಾರೆ. ಈ ವೇಳೆ ಗಗನಸಖಿಯೊಬ್ಬರು ಪತ್ರ ಬರೆದು ಶೌಚಾಲಯದ ಒಳಗೆ ಕಳಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನೀವು ಯಾವುದೇ ಕಾರಣಕ್ಕೂ ಗಾಬರಿ ಪಡೆಬೇಡಿ.
ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಕೆಲವೇ ನಿಮಿಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುತ್ತೇವೆ. ಆಗ ಮುಖ್ಯ ಬಾಗಿಲು ತೆಗೆಯಲಿದೆ ನಮ್ಮ ಇಂಜಿನಿಯರ್ ಗಳು ಬಂದು ಶೌಚಾಲಯದ ಬಾಗಿಲು ತೆರೆಯುತ್ತಾರೆ ಎಂದು ಪತ್ರ ಬರೆದು ಧೈರ್ಯ ತುಂಬಿದ್ದಾರೆ.
ಕೊನೆಗೆ ಬೆಳಗ್ಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಬಾಗಿಲು ತೆರೆದಿದ್ದು ಒಂದು ಗಂಟೆಯ ಕಾರ್ಯಾಚರಣೆ ಬಳಿಕ ಪ್ರಯಾಣಿಕ ಹೊರ ಬಂದಿದ್ದಾರೆ