ಬೆಂಗಳೂರು, ಜೂ.7– ರಾಜ್ಯದಲ್ಲಿ ಸಾಂಕ್ರಾಮಿಕ ಕೋವಿಡ್ ನಾಲ್ಕನೆ ಅಲೆ ತೀವ್ರಗತಿಯಲ್ಲಿ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದು ತೀವ್ರಗತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದ್ದು, ನಗರದ ಸಾರ್ವಜನಿಕ ಪ್ರದೇಶಗಳಲ್ಲಿ “ಮಾಸ್ಕ್” ಧರಿಸುವಿಕೆಯನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್‌ಕುಮಾರ್, ನಾಲ್ಕನೇ ಅಲೆ ಬರುವ ಮುನ್ಸೂಚನೆ ಹಿನ್ನೆಲೆ ಬಿಬಿಎಂಪಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ, ಇದರ ಭಾಗವಾಗಿ ಇಂದಿನಿಂದ ಮಾರ್ಷಲ್‌ಗಳು ಮಾಸ್ಕ್ ಧರಿಸುವ ಕುರಿತು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದರು.
ಹೊರಾಂಗಣ ಚಟುವಟಿಕೆ, ಶಾಪಿಂಗ್ ಮಾಲ್, ವಾಣಿಜ್ಯ ಸಂಕೀರ್ಣ, ಬಸ್, ರೈಲ್ವೆ ನಿಲ್ದಾಣಗಳು, ಆಸ್ಪತ್ರೆ, ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದರ ಮೇಲೆ ನಿಗಾ ಇರಿಸಲು ಬಿಬಿಎಂಪಿ ಮಾರ್ಷಲ್‌ಗಳು ಇಂದಿನಿಂದ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದರು.
ಸದ್ಯ ಸರ್ಕಾರದ ನಿರ್ದೇಶನ ಅನ್ವಯ ಮಾಸ್ಕ್ ಸಂಬಂಧ ಯಾವುದೇ ದಂಡವನ್ನು ಪಾಲಿಕೆ ಹಾಕುತ್ತಿಲ್ಲ. ಆದರೆ, ಸಾರ್ವಜನಿಕರು ನಿರ್ಲಕ್ಷ್ಯ ತೋರದೆ, ಮಾಸ್ಕ್ ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಇನ್ನೂ, ನಗರದಲ್ಲಿ ಜನಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಅಧಿಕಗೊಳಿಸಲಾಗಿದೆ. ಸದ್ಯ ದಿನಕ್ಕೆ16 ಸಾವಿರ ಪರೀಕ್ಷೆ ನಡೆಯುತ್ತಿದ್ದು, ಇದರ ಸಂಖ್ಯೆ ಇಪ್ಪತ್ತು ಸಾವಿರ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.