ವಾಷಿಂಗ್ಟನ್ ; ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್, ಟ್ವಿಟರ್, ವಾಟ್ಸ್ ಆಪ್ ನ ಮಾತೃ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ತನ್ನ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದರಲ್ಲಿ ದಾಖಲೆ ಮಾಡುತ್ತಿದೆ.
ವೆಚ್ಚ ಕಡಿತದ ಹೆಸರಲ್ಲಿ ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆ.ಕೆಲಸ ಕಳೆದುಕೊಂಡವರು ಕೊಟ್ಟಷ್ಟನ್ನು ತೆಗೆದುಕೊಂಡು ಜಾಗ ಖಾಲಿ ಮಾಡಬೇಕಾಗುತ್ತಿದೆ.
ಇತ್ತೀಚೆಗಷ್ಟೇ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಫೇಸ್‌ಬುಕ್, ವಾಟ್ಸ್‌ಆಯಪ್ ಮಾತೃಸಂಸ್ಥೆ ಮೆಟಾ ಇದೀಗ ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ವೆಚ್ಚ ಕಡಿತದ ಭಾಗವಾಗಿ ಎರಡನೇ ಹಂತದಲ್ಲಿ ಒಟ್ಟು 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮೆಟಾ ಸಂಸ್ಥೆ ಘೋಷಿಸಿದೆ.
ಇದಿಷ್ಟೇ ಅಲ್ಲ ವರ್ಷದ ಆರಂಭದಲ್ಲಿ ಘೋಷಿಸಿದ್ದ ಹೊಸದಾಗಿ ಐದು ಸಾವಿರ ಉದ್ಯೋಗಿಗಳ ನೇಮಕದ ಘೋಷಣೆಯಿಂದಲೂ ಹಿಂದೆ ಸರಿದಿದೆ.ಸದ್ಯಕ್ಕೆ ಯಾವುದೇ ಹೊಸ ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ
ಕೊರೊನಾ ನಂತರದಲ್ಲಿ ಚೇತರಿಕೆ ಕಾಣದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಬಡ್ಡಿ ದರ ಏರಿಕೆಯಿಂದ ರಕ್ಷಣೆ ಪಡೆಯುವ ಮೂಲಕ ಕಂಪನಿಯನ್ನು ಸುಸ್ಥಿತಿಯಲ್ಲಿಡುವ ಕಾರಣದಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮೆಟಾ ಸಂಸ್ಥೆ ಹೇಳಿದೆ.
ಕಳೆದ ನವೆಂಬರ್‌ನಲ್ಲಷ್ಟೇ ಟೆಕ್ ದೈತ್ಯ ಕಂಪನಿ ಮೆಟಾ, ಒಟ್ಟು 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಅವರಿಗೆ ಪರಿಹಾರವಾಗಿ ಮೂರು ತಿಂಗಳ ಸಂಬಳ ಹಾಗೂ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿಸ್ತರಿಸಿತ್ತು.