ಬೆಂಗಳೂರು, ನ.30- ಸಚಿವರಾದ ರಾಮಲಿಂಗ ರೆಡ್ಡಿ, ಕೆ ಎಚ್ ಮುನಿಯಪ್ಪ ರಹೀಂ ಖಾನ್, ಕೆ ಎನ್ ರಾಜಣ್ಣ, ಜಮೀರ್ ಅಹಮದ್ ಖಾನ್, ಸೇರಿದಂತೆ 72 ಮಂದಿ ಶಾಸಕರು ನಿಗಧಿತ ಸಮಯದಲ್ಲಿ ನಿಗದಿಪಡಿಸಿದ ನಿಯಮಾನುಸಾರ ಲೋಕಾಯುಕ್ತಕ್ಕೆ (Karnataka Lokayukta) ತಮ್ಮ ಆಸ್ತಿಪಾಸ್ತಿಗಳ ವಿವರ ಸಲ್ಲಿಸಿಲ್ಲ.
ಭ್ರಷ್ಟಾಚಾರ ನಿಯಂತ್ರಿಸುವ ದೃಷ್ಟಿಯಿಂದ ಶಾಸನಸಭೆಗೆ ಆಯ್ಕೆಯಾದವರ ಆಸ್ತಿ ವಿವರಗಳ ಮೇಲೆ ನಿಗಾ ವಹಿಸುವ ಸಲುವಾಗಿ ಅವರ ವಿವರ ಲೋಕಾಯುಕ್ತಕ್ಕೆ ಸಲ್ಲಿಸಬೇಕು.
ಶಾಸನ ಸಭೆಗೆ ಆಯ್ಕೆಯಾದ ಮೂರು ತಿಂಗಳೊಳಗೆ ಸದಸ್ಯರು ತಮ್ಮ ಆಸ್ತಿ ವಿವರನ್ನು ಸಲ್ಲಿಸಬೇಕಾದ ನಿಯಮ ಉಲ್ಲಂಘಿಸಿರುವ ರಾಜ್ಯದ ವಿಧಾನ ಸಭಾ ಹಾಗೂ ವಿಧಾನಪರಿಷತ್ ನ 72 ಮಂದಿ ಸದಸ್ಯರ ಪಟ್ಟಿಯನ್ನು ಲೋಕಾಯುಕ್ತ ಬಹಿರಂಗಪಡಿಸಿದೆ.
ಆಯ್ಕೆಯಾದ ಮೂರು ತಿಂಗಳೊಳಗೆ ಸದಸ್ಯರು ತಮ್ಮ ಆಸ್ತಿ ವಿವರನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮವಿದ್ದರೂ ಕೆಲವು ಶಾಸಕರು ಹಾಗೂ ಪರಿಷತ್ ಸದಸ್ಯರು ಇದುವರೆಗೂ ಲೋಕಾಯುಕ್ತ ಕಚೇರಿಗೆ ಆಸ್ತಿ ವಿವರವನ್ನು ಸಲ್ಲಿಸಿಲ್ಲ.ಇದರಿಂದಾಗಿ ಆಸ್ತಿ ವಿವರ ಸಲ್ಲಿಸದ ಶಾಸಕರುಗಳ ಪಟ್ಟಿಯನ್ನು ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆಸಿ ನಾರಾಯಣಗೌಡ, ಎಸ್ ಅಂಗಾರ ಆಸ್ತಿ ವಿವರ ಸಲ್ಲಿಸದೇ ನಿಮಯ ಉಲ್ಲಂಘಿಸಿದ್ದರು. ಈ ಬಾರಿ ರಹೀಂ ಖಾನ್, ಕೆ ಎನ್ ರಾಜಣ್ಣ, ಜಮೀರ್ ಅಹಮದ್ ಖಾನ್, ರಾಮಲಿಂಗ ರೆಡ್ಡಿ, ಕೆ ಎಚ್ ಮುನಿಯಪ್ಪ ಅವರು ಸಹ ಆಸ್ತಿ ವಿವರ ಸಲ್ಲಿಸಿಲ್ಲ.
ಕಳೆದ ವಿಧಾನಸಭೆ ಅವಧಿಯ 81 ಮಂದಿ ಶಾಸಕರು ಆಸ್ತಿ ವಿವರ ಸಲ್ಲಿಸದೇ ಲೋಪ ಎಸಗಿದ್ದು,ಈ ವಿಧಾನಸಭೆ ಅವಧಿಯ 51 ಮಂದಿ ಶಾಸಕರ ಆಸ್ತಿ ವಿವರ ಸಲ್ಲಿಕೆ ಆಗಿಲ್ಲ.
ಹಾಗಯೇ 21 ವಿಧಾನ ಪರಿಷತ್ ಸದಸ್ಯರು ಸಹ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಇನ್ನುಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಗಡುವು ಮುಗಿದ ಅಂದರೆ ಜೂನ್ 30 ರ ಬಳಿಕ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ಅವಧಿ ಮುಗಿದ ಬಳಿಕ 10 ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯ ಆಸ್ತಿ ವಿವರ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕಾ ಗಡುವು:
ರಾಜ್ಯದ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಅವರು ಜೂ.30ರ ಗಡುವು ನೀಡಿದ್ದರು. ಈ ಅವಧಿಯಲ್ಲಿ ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚನೆ ನೀಡಿದ್ದರು.ಅದರಂತೆ ಮುಖ್ಯ ಕಾರ್ಯದರ್ಶಿ ಎಲ್ಲರಿಗೂ ಪತ್ರ ರವಾನಿಸಿದ್ದರು.
ಲೋಕಾಯುಕ್ತ ನಿಯಮಗಳ ಪ್ರಕಾರ ಚುನಾಯಿತ ಪ್ರತಿನಿಧಿಗಳು ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆಂದು ಸುಮ್ಮನಿರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಮೊದಲ ಬಾರಿ ಆಯ್ಕೆಯಾದ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂ.30ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮ ಜರುಗಿಸಬಹುದಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 22(1), ಕಲಂ 7ರ ಉಪಕಲಂ (1)ರಂತೆ ಸರಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ನೌಕರ ಈ ಕಾಯಿದೆಯಂತೆ, ಈ ಅಧಿನಿಯಮ ಜಾರಿಗೆ ಬಂದ ಮೂರು ತಿಂಗಳೊಳಗೆ ಮತ್ತು ಜೂನ್‌ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ಪ್ರತಿ ವರ್ಷ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದ್ದು ಅದು ಕಡ್ಡಾಯವಾಗಿದೆ.
ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದಲ್ಲಿ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಕ್ಷಮ ಪ್ರಾಧಿಕಾರ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕಾಯ್ದೆಯಲ್ಲಿ ಅವಕಾಶವಿದೆ.