ಬೆಂಗಳೂರು,ಫೆ.9- ಲೋಕಸಭೆ Election ಹೊಸ್ತಿಲಿನಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕುತೂಹಲ ಮೂಡಿಸಿವೆ .ಅದರಲ್ಲೂ ಪ್ರಮುಖವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ನಾಯಕ ರಣದೀಪ್ ಸುರ್ಜೇವಾಲ ವಿರುದ್ಧ ಮಂತ್ರಿಗಳು ಬಂಡಾಯ ಸಾರಿದ್ದಾರೆ.
ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಅಹಿಂದ ಸಮುದಾಯಕ್ಕೆ ಸೇರಿದ ಮಂತ್ರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರದ ಆಡಳಿತ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಸುರ್ಜೆವಾಲ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಸುರ್ಜೇವಾಲ ಅವರು ಮೂಗು ತೂರಿಸುತ್ತಿದ್ದಾರೆ. ಕಾರ್ಯಕರ್ತರಿಗೆ ಶಿಫಾರಸು ಪತ್ರಗಳನ್ನು ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರು ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಮುಖವಾಗಿ ನಿಗಮ ಮಂಡಳಿ ನೇಮಕಾತಿ ವಿಷಯದಲ್ಲಿ ಇವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಿರ್ಧಾರ ಕೈಗೊಂಡಿದ್ದಾರೆ ಅದನ್ನು ಆದೇಶದ ಮೂಲಕ ಜಾರಿಗೆ ತರುವಂತೆ ಇಲಾಖೆಯ ಉಸ್ತುವಾರಿಗಳಾದ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿಗಮ ಮಂಡಳಿ ನೇಮಕಾತಿ ಕುರಿತಂತೆ ಪಕ್ಷದ ಜಿಲ್ಲಾ ಘಟಕಗಳು ಶಾಸಕರು ಹಾಗೂ ಹಿರಿಯ ಮುಖಂಡರೊಂದಿಗೆ ಸತತ ಸಮಾಲೋಚನೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗಿದೆ ಅದನ್ನು ಅನುಮೋದಿಸುವಂತೆ ಹೈಕಮಾಂಡ್ ಗೆ ರವಾನಿಸಿದ್ದನ್ನೆ ನೆಪವಾಗಿಟ್ಟುಕೊಂಡು ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ಗೊತ್ತಾಗಿದೆ.
ನಿನ್ನೆ ಬೆಳಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ನಿವಾಸದಲ್ಲಿ ಉಪಹಾರ ಸಭೆ ನಡೆಸಿದ ಈ ಎಲ್ಲಾ ಸಚಿವರು ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ನುಸುಳಿರುವ ಪ್ರಭಾವತಿ ಕಾಂತಾ ನಾಯಕ್ ಪ್ರೇಮ ಸರೋವರ ಶ್ರೀನಿವಾಸ್ ಸೇರಿದಂತೆ ಒಂಬತ್ತು ಹೆಸರುಗಳ ಬಗ್ಗೆ ಈ ಎಲ್ಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಪಕ್ಷಕ್ಕೆ ನೀಡಿರುವ ಕೊಡುಗೆ ಏನು ಯಾವ ಆಧಾರದಲ್ಲಿ ಇವರಿಗೆ ನಿಗಮ ಮಂಡಳಿಯ ಹುದ್ದೆ ನೀಡಬೇಕು ಸುರ್ಜೇವಾಲ ಅವರು ಯಾವ ಅಂಶ ಪರಿಗಣಿಸಿ ಇವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದು ಪ್ರಶ್ನಿಸಿರುವ ಈ ನಾಯಕರು ಯಾವುದೇ ಕಾರಣಕ್ಕೂ ಈ ಪಟ್ಟಿಗೆ ಅನುಮೋದನೆ ನೀಡಬಾರದು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಪಕ್ಷದ ಉಸ್ತುವಾರಿಯಾಗಿರುವ ಈ ನಾಯಕ ಅನಗತ್ಯವಾಗಿ ಆಡಳಿತ ವ್ಯವಹಾರಗಳಲ್ಲಿ ಮಾಡುತ್ತಿರುವ ಹಸ್ತಕ್ಷೇಪದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿರುವುದಾಗಿ ಗೊತ್ತಾಗಿದೆ.