ಬೆಂಗಳೂರು.
ದೇಶ – ವಿದೇಶಗಳಲ್ಲಿ ಯಾವುದಾದರೂ ಗಂಭೀರ ಸಮಸ್ಯೆ ಅಥವಾ ಬಿಕ್ಕಟ್ಟು ಸೃಷ್ಟಿಯಾದರೆ ಅವುಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಅವರ ಹೆಸರು ಪ್ರಸ್ತಾಪಿಸುವುದು ವಾಡಿಕೆ. ಇವರಿಬ್ಬರಲ್ಲಿ ಯಾರಾದರೊಬ್ಬರು ಮಧ್ಯ ಪ್ರವೇಶಿಸಿದರೆ ಅದು ಪರಿಹಾರವಾಗಲಿದೆ ಎನ್ನುವುದು ನಂಬಿಕೆ.
ಇದೇ ಮಾನದಂಡವನ್ನು ಅನುಸರಿಸಿ ಜಗಳವೊಂದರ ಪರಿಹಾರಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮಧ್ಯ ಪ್ರವೇಶಿಸುವಂತೆ ರಾಜ್ಯಸಭೆಯ BJP ಸದಸ್ಯ ಹಾಗೂ ನಟ ಜಗ್ಗೇಶ್ (Jaggesh) ಮನವಿ ಮಾಡಿದ್ದಾರೆ.
ಅದು ಯಾವುದು ಅಂತಹ ಜಗಳ ಎನ್ನುತ್ತಿರಾ? ಅದೇ IPS ಅಧಿಕಾರಿ ಡಿ.ರೂಪಾ (D Roopa) ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ.
ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುವ ಮೂಲಕ ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ಈ ಪ್ರಕರಣದ ಇತ್ಯರ್ಥಕ್ಕೆ ಜಗ್ಗೇಶ್ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಜಗ್ಗೇಶ್ ಟ್ವಿಟರ್ (Twitter) ಮೂಲಕ ಸಾರ್ವಜನಿಕವಾಗಿ ಘನತೆಯನ್ನು ಕಾಪಾಡಿಕೊಳ್ಳುವಂತೆ IPS ಅಧಿಕಾರಿ ರೂಪಾ ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
‘IPS ಮತ್ತು IAS ಹುದ್ದೆಗಳು ಜನರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಸ್ಥಾನಗಳಾಗಿವೆ. ಸರ್ಕಾರ ಮತ್ತು ಜನರ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತವೆ. ವೈಯಕ್ತಿಕ ದ್ವೇಷವನ್ನು ಮಾಧ್ಯಮಗಳ ಮುಂದೆ ತರಬಾರದು. ಸಾರ್ವಜನಿಕವಾಗಿ ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು IPS ಅಧಿಕಾರಿ ರೂಪಾ ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸಲಹೆ ನೀಡುವಂತೆ ನಾನು ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ವಿನಂತಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ನರೇಂದ್ರ ಮೋದಿ, ಅಮಿತ್ ಶಾ ಮತ್ತು ರೂಪಾ ಅವರಿಗೆ ಟ್ಯಾಗ್ ಮಾಡಲಾಗಿದೆ.
ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಸೇವಾ ನಿಯಮ ಮತ್ತು ಸರ್ಕಾರದ ಕಟ್ಟುಪಾಡುಗಳನ್ನು ಅನುಸರಿಸಿ ಕೆಲಸ ಮಾಡಬೇಕು. ಇದರಲ್ಲಿ ಲೋಪವಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ಅಥವಾ ಸರ್ಕಾರದ ಉನ್ನತ ವ್ಯವಸ್ಥೆ ಇದೆ. ಆದರೆ ಇದೀಗ ಜಗ್ಗೇಶ್ ಅವರ ಟ್ವೀಟ್ ಗಮನಿಸಿದರೆ ರಾಜ್ಯ ಸರ್ಕಾರಕ್ಕೆ ಇವರಿಬ್ಬರ ಜಗಳ ಬಗೆಹರಿಸಲು ಸಾಧ್ಯವಿಲ್ಲವೇನೋ ಎಂಬ ಸಂದೇಹ ಮೂಡಿಸುತ್ತದೆ.
ಸದ್ಯ IPS ಅಧಿಕಾರಿ ಡಿ. ರೂಪಾ ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ ಬಹಿರಂಗ ಸಂಘರ್ಷ ಮುಂದುವರಿಯುತ್ತಲೇ ಸಾಗಿದ್ದು, ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಿದೆ. ಇಬ್ಬರೂ ಆರೋಪ – ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕರಣ ಜೋರು ಚರ್ಚೆಯಾಗುತ್ತಿದೆ. ಶಾಸಕ ಸಾ.ರಾ. ಮಹೇಶ್ (Sa Ra Mahesh) ಜೊತೆ ಸಿಂಧೂರಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂಬ ಸುದ್ದಿಯನ್ನು ಪ್ರಸ್ತಾಪಿಸಿ ಡಿ. ರೂಪಾ ಮೊದಲಿಗೆ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಿಂಧೂರಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ನಂತರ ಅದು ನಗ್ನ ಚಿತ್ರ ಹಂಚಿಕೆಯಾಗಿರುವ ಹಂತಕ್ಕೆ ಬಂದು ನಿಂತಿದೆ.
ಈ ಮಧ್ಯೆ, ಅಧಿಕಾರಿಗಳ ಬೀದಿಜಗಳದಿಂದ ಮುಜುಗರಕ್ಕೆ ಒಳಗಾಗಿರುವ ಸರ್ಕಾರ, ಶಿಸ್ತು ಉಲ್ಲಂಘನೆ, ದುರ್ನಡತೆ, ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದೆ. ಇಬ್ಬರಿಗೂ ನೋಟಿಸ್ ನೀಡಲಾಗಿದೆ.