ಮೈಸೂರು – ಬಂಡಿಪುರ ರಕ್ಷಿತಾರಣ್ಯದಲ್ಲಿ ಹುಲಿ ಸಫಾರಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣಿಗೆ ಒಂದು ಹುಲಿಯೂ ಬೀಳಲಿಲ್ಲವಂತೆ. ಒಂದು ವೇಳೆ ಹುಲಿ ಏನಾದರೂ ಕಾಣಿಸಿದರೆ ಅದನ್ನು ಹಿಡಿದು ಮಾರಿಬಿಡುತ್ತಿದ್ದರಂತೆ.
ಇದೇನಿದು ಹೀಗೆ ಹೇಳುತ್ತೀರಿ, ಎಂದು ಕೇಳುತ್ತೀರಾ.. ಅದೇನು ಅಂತ ಗೊತ್ತಾಗ್ಬೇಕು, ಅಂದ್ರೆ ಈ ಸ್ಟೋರಿ ನೋಡಿ.
ಹುಲಿ ಯೋಜನೆಯ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಹೈದರಾಬಾದ್ ನಿಂದ ಮೈಸೂರಿಗೆ ಆಗಮಿಸಿದ್ದ ಅವರು ರಾತ್ರಿ ತಂಗಿದ್ದ ರ‌್ಯಾಡಿಸನ್ ಬ್ಲ್ಯೂ ಹೋಟೆಲ್‌ನಿಂದ ಬೆಳಿಗ್ಗೆ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ರಸ್ತೆ ಮಾರ್ಗವಾಗಿ ಹೊರಟು ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿಯ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿದರು.
ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಬಂಡೀಪುರ ಕ್ಯಾಂಪಸ್‌ಗೆ ತೆರಳಿದ ಅವರು, ಅಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ರಕ್ಷಿತ ಅರಣ್ಯದ ಸ್ಥಿತಿಗತಿಗಳು, ಇಲ್ಲಿ ಕಾಣಸಿಗುವ ಪ್ರಾಣಿಗಳು ,ಹುಲಿ ಸಂರಕ್ಷಣೆಗೆ ಸರ್ಕಾರ ರೂಪಿಸಿರುವ ಯೋಜನೆ, ಮತ್ತು ಅರಣ್ಯದಲ್ಲಿರುವ ಹುಲಿಗಳ ಸಂಖ್ಯೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.
ಬಳಿಕ ಅವರಿಗಾಗಿಯೇ ಸಿದ್ಧಪಡಿಸಿದ್ದ ವಿಶೇಷ ವಾಹನದಲ್ಲಿ ಬೆಂಗಾವಲು ಪಡೆಯೊಂದಿಗೆಷಸಫಾರಿಗೆ ಹೊರಟರು.
ಸಫಾರಿಗಾಗಿಯೇ ವಿಶೇಷವಾಗಿ ವಿನ್ಯಾಸ ಪಡಿಸಿದ ಉಡುಪು ಧರಿಸಿ ಕೈಯಲ್ಲಿ ಬೈನಾಕ್ಯುಲರ್ ಹಿಡಿದು ಹೊರಟ ಪ್ರಧಾನಿ ಸಫಾರಿ ವಾಹನದಲ್ಲಿ ಕಾಡನ್ನು ಸುತ್ತಿದರು. ಸುಮಾರುಷಎರಡು ಗಂಟೆಗಳ ಅವಧಿಯಲ್ಲಿ ಮೋದಿ ಅವರು, ಅರಣ್ಯದ ಕಚ್ಚಾ ರಸ್ತೆಯಲ್ಲಿ 22 ಕಿ.ಮೀ ಸಂಚರಿಸಿ ಬಂಡೀಪುರದ ಅರಣ್ಯ, ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.
ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ‘ಆನೆಗಳು, ಜಿಂಕೆಗಳು, ಕಾಟಿಗಳು ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ಪ್ರಧಾನಿ ಅವರಿಗೆ ಸಫಾರಿ ಸಮಯದಲ್ಲಿ ಎದುರಾದವು. ಕಾಡಿನ ರಾಜ ಹುಲಿಗಾಗಿ ಕಣ್ಣಿಗೆ ಬೈನಾಕ್ಯುಲರ್ ಇಟ್ಟು ಪ್ರಧಾನಿ ಮೋದಿ ಬಂಡಿಪುರ ಅರಣ್ಯದ ಹಲವಡೆ ಕಣ್ಣು ಹಾಯಸಿದರೂ ಅವರಿಗೆ ಹುಲಿ ನೋಡಲು ಸಿಗಲೇ ಇಲ್ಲ. ಪ್ರಧಾನಿ ಅವರ ಸಫಾರಿಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಕಾಡಿನಲ್ಲಿ ನಮಗೆ ನೋಡಲು ಆನೆ ಕಾಟಿ ಜಿಂಕೆ ಮೊದಲಾದ ಪ್ರಾಣಿಗಳು ನೂರಾರು ಪಕ್ಷಿಗಳು ಸಿಕ್ಕವು ಆದರೆ ನಮಗೆ ಹುಲಿ ಕಾಣಿಸಲಿಲ್ಲ’ ಎಂದು ಅಧಿಕಾರಿ ಮಾಹಿತಿ ನೀಡಿದರು.
ಸಫಾರಿ ವೀಕ್ಷಣೆಯ ನಂತರ ಪ್ರಧಾನಿ ಮೋದಿ ಅವರು ಅರಣ್ಯದ ಕಚ್ಚಾ ರಸ್ತೆಯಲ್ಲೇ ಸಾಗಿ ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗೆ ತಲುಪಿದರು. ಅಲ್ಲಿಂದ ತಮ್ಮ ವಾಹನದಲ್ಲಿ ತಮಿಳುನಾಡಿನ ಮಧುಮಲೆ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು ಎಂದು ಹೇಳಿದರು.
ಬಂಡಿಪುರ ಅರಣ್ಯದಲ್ಲಿ ಪ್ರಧಾನಿ ಸಫಾರಿ ನಡೆಸಿದ ಸಮಯದಲ್ಲಿ ಒಂದು ಹುಲಿಯೂ ಕಣ್ಣಿಗೆ ಬೀಳಲಿಲ್ಲ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಟ್ವೀಟ್ ಮಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ವೇಳೆ ಪ್ರಧಾನಿ ಅವರ ಕಣ್ಣಿಗೆ ಹುಲಿ ಬಿದ್ದಿದ್ದರೆ ಅದನ್ನು ಹಿಡಿದು ಮಾರಿಬಿಡುತ್ತಿದ್ದರೇನೋ.. ಇದೇ ಭಯದಿಂದ ಹುಲಿ ರಾಯ ಗುಹೆ ಬಿಟ್ಟು ಹೊರಬಂದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲ ಕನ್ನಡಿಗರು ಸೇವ್ ಬಂಡಿಪುರ ಎಂಬ ಅಭಿಯಾನ ಆರಂಭ ಮಾಡದಿರುವಂತೆ ಆಗಲಿ ಅದೇ ನೀವು ಕನ್ನಡಿಗರಿಗೆ ಮಾಡುವ ಉಪಕಾರ ಎಂದು ಪ್ರಧಾನಿ ಮೋದಿ ಅವರ ನಡೆಯನ್ನು ಟೀಕಿಸಿದ್ದಾರೆ.