ದಾವಣಗೆರೆ, ನ.20- ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಮುರುಘಾ ಶರಣರು (Murugha Shree) ಇದೀಗ ಮತ್ತೊಂದು ಪ್ರಕರಣದಲ್ಲಿ ಮತ್ತೇ ಜೈಲು ಪಾಲಾದರು.
ಇವರ ವಿರುದ್ಧ ದಾಖಲಾಗಿದ್ದ ಒಂದು ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದರು.
ಇವರ ವಿರುದ್ಧ ಸಲ್ಲಿಕೆಯಾಗಿದ್ದ 2ನೇ ಪೋಕ್ಸೋ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರಣರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತು.ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ
ನೇತೃತ್ವದ ತಂಡ ದಾವಣಗೆರೆ ವಿರಕ್ತ ಮಠಕ್ಕೆ ಆಗಮಿಸಿ ಮುರುಘಾಶ್ರೀಗಳನ್ನು ವಶಕ್ಕೆ ತೆಗೆದುಕೊಂಡಿತು.
ಈ ಹಿನ್ನೆಲೆಯಲ್ಲಿ 1ನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷಗಳ ಕಾಲ ಜೈಲಿನಲ್ಲಿದ್ದು, ಆಚೆ ಬಂದಿರುವ ಮುರುಘಾಶ್ರೀಗೆ ಮತ್ತೆ ಜೈಲು ಪಾಲಾದರು.
ಮಾಜಿ ಶಾಸಕ ದೌಡು:
ಶ್ರೀಗಳ ವಿರುದ್ಧ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ಹರಿಹರದ ಮಾಜಿ ಶಾಸಕ ಶಿವಶಂಕರ್ ಅವರು ಮುರುಘಾಶ್ರೀ ಇರುವ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ವಾರಂಟ್ ಜಾರಿ ಮಾಡುತ್ತೆಂದು ನಿರೀಕ್ಷೆ ಇರಲಿಲ್ಲ. ಮುರುಘಾಶ್ರೀಗಳು ಆರೋಪಿ ಅಷ್ಟೇ, ಅಪರಾಧಿಯಲ್ಲ. ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು, ಎಲ್ಲವನ್ನೂ ಎದುರಿಸಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ ಎಂದರು.