ಬೆಂಗಳೂರು – ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಮಂದಿರ ಕರಸೇವಕರ ಬಂಧನ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ನಡುವೆ ಸಂಘರ್ಷ ನಡೆಯುತ್ತಿದ್ದರೆ ರಾಮನಗರದ ಕಾಂಗ್ರೆಸ್ ಶಾಸಕ ಹಾಗೂ ಅಲ್ಪಸಂಖ್ಯಾತ ಮುಖಂಡ ಇಕ್ಬಾಲ್ ಹುಸೇನ್ ರಾಮ ನಾಮ ಜಪ ಮಾಡುತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ರಾಮ ದೇವರ ಬೆಟ್ಟದಲ್ಲಿರುವ ರಾಮದೇವರ ದೇವಾಲಯದಲ್ಲಿ ರಾಮೋತ್ಸವ ಮಾಡುವುದಾಗಿ ಹೇಳಿದ್ದಾರೆ.
ನಾನೂ ರಾಮನ ಭಕ್ತ, ನಾನು ಎಲ್ಲಾ ದೇವರನ್ನು ಪೂಜಿಸ್ತೇನೆ. ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡುತ್ತೇನೆ. ರಾಮಮಂದಿರ ವಿಚಾರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲ್ಲ ಎಂದರು.
ಜನರನ್ನು ಒಡೆದು ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಗೆ ತನ್ನದೇ ಆದ ಬದ್ಧತೆ, ಸಿದ್ದಾಂತವಿದೆ. ಲೋಕಸಭಾ Election ದೃಷ್ಟಿಯಿಂದ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರುವ ವಿಚಾರ. ಆದರೆ ನಾವು ರಾಮನನ್ನು ಮನೆ ದೇವರೆಂದು ಪೂಜೆ ಮಾಡುತ್ತೇವೆ. ಅವರಿಗೆ ರಾಮನ ಪೂಜೆ ಹೊಸದಿರಬಹದು, ಆದರೆ ನಮಗೆ ಹೊಸದೇನಲ್ಲ. ಅದಕ್ಕಾಗಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕಂದಿನಿಂದಲೂ ನಾನು ಶ್ರೀ ರಾಮನ ಭಕ್ತ.ಅವನನ್ನು ಪೂಜೆ ಮಾಡುತ್ತಲೇ ಬೆಳೆದವನು. ಅವನ ಆಶೀರ್ವಾದದಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.
ರಾಮದೇವರ ಬೆಟ್ಟದಲ್ಲಿ ಭಗವಾನ್ ಶ್ರೀ ರಾಮ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವ ಶಿವನ ದೇವಾಲಯವಿದೆ.ಈ ದೇವಾಲಯವೂ ಸೇರಿದಂತೆ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇನೆ.ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೊದಲ ಕಂತನ್ನು ರಾಮದೇವರ ದೇವಸ್ಥಾನದ ಅಭಿವೃದ್ಧಿಗೆ ನೀಡುವ ಮೂಲಕ ರಾಮೋತ್ಸವ ಮಾಡುತ್ತೇನೆ ಎಂದು ತಿಳಿಸಿದರು.