ಬೆಂಗಳೂರು – ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ ವಿಧಾನ ಪರಿಷತ್ ನಲ್ಲಿ ತಿರಸ್ಕೃತಗೊಂಡಿದೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಯನ್ನು ವಿಧಾನ ಪರಿಷತ್ ನಲ್ಲಿ ಅಂಗೀಕಾರ
ಪಡೆದುಕೊಳ್ಳಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಂಡನೆ ಮಾಡಿದರು.
ಮಸೂದೆಯ ಪ್ರಮುಖ ಅಂಶಗಳನ್ನು ಸದನಕ್ಕೆ ವಿವರಿಸಿದ ಅವರು ಇದರಲ್ಲಿ ಯಾವುದೇ ರೀತಿಯ ವಿವಾದಾತ್ಮಕ ಅಂಶಗಳಿಲ್ಲ ದೇವಾಲಯಗಳ ಆದಾಯವನ್ನು ಆಯಾ ದೇವಾಲಯಗಳ ಅಭಿವೃದ್ಧಿಗೆ ಬಳಸಲು ಪ್ರಸ್ತಾವನೆ ಮಾಡಲಾಗಿದೆ ಎಂದು ಹೇಳಿದರು ಪ್ರಮುಖವಾಗಿ 10 ಲಕ್ಷದಿಂದ 1 ಕೋಟಿ ರೂಪಾಯಿ ಹಾಗೂ ಅದಕ್ಕೂ ಮೀರಿದ ಆದಾಯದ ದೇವಸ್ಥಾನಗಳು ಸರ್ಕಾರಕ್ಕೆ ನೀಡುತ್ತಿದ್ದ ಹಣವನ್ನು ದುಪ್ಪಟ್ಟು ಮಾಡಲಾಗಿದೆ.
ವಿಧೇಯಕದಲ್ಲಿ ಸರ್ಕಾರದ ಮುಜರಾಯಿ ಇಲಾಖೆಗೆ ದೇವಸ್ಥಾನಗಳು ನೀಡುತ್ತಿದ್ದ ಆದಾಯದ ಹಣವನ್ನು ಇದೀಗ ದ್ವಿಗುಣಗೊಳಿಸಲಾಗಿದೆ. ಇನ್ನು ಮುಂದೆ 10 ಲಕ್ಷದಿಂದ 1 ಕೋಟಿ ಆದಾಯದ ದೇವಸ್ಥಾನಗಳು ತಮ್ಮ ಆದಾಯದ ಶೇ.5 ರಷ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇನ್ನೂ 1 ಕೋಟಿಗೂ ಆದಾಯ ಮೀರಿದ ದೇವಸ್ಥಾನಗಳು ಆದಾಯದ ಶೇ.10 ರಷ್ಟು ಹಣ ಸಲ್ಲಿಕೆ ಮಾಡಬೇಕು ಎಂದು ತಿದ್ದುಪಡಿ ಮಾಡಲಾಗಿದೆ
ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ಒದಗಿಸಲಾಗಿದೆ. ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ಪರಿಹಾರ ಕೊಡಲು ಅವಕಾಶ ನೀಡಲಾಗಿದೆ. ಈ ಮುಂಚೆ ಮೃತಪಟ್ಟವರಿಗೆ ಕೇವಲ 35 ಸಾವಿರ ರೂ ಕೊಡಲಾಗುತ್ತಿತ್ತು. ಜೊತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂಪಾಯಿಯಿಂದ 5೦ ಸಾವಿರ ರೂ ವರೆಗೆ ಸ್ಕಾಲರ್ ಶಿಪ್ ನೀಡಲು ಅವಕಾಶ ಮಾಡಿಕೊಡಲಾಗಿದೆ. ಎಂದು ವಿವರಿಸಿದರು.
ಸದನದಲ್ಲಿ ಈ ಕುರಿತಂತೆ ಸುಧೀರ್ಘ ಪರ ವಿರೋಧದ ಚರ್ಚೆ ನಡೆದು ಅಂತಿಮವಾಗಿ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಅವರು ಮಸೂದೆಯನ್ನು ಮತಕ್ಕೆ ಹಾಕಿದರು ಆಗ
ವಿಧೇಯಕದ ಪರವಾಗಿ 7 ಮತಗಳು, ವಿರೋಧವಾಗಿ 18 ಮತಗಳು ಚಲಾಯಿಸಲಾಯಿತು. ಹೀಗಾಗಿ ವಿಧೇಯಕದ ವಿರೋಧವಾಗಿ ಹೆಚ್ಚು ಮತ ಚಲಾವಣೆಯಾದ ಕಾರಣ, ವಿಧಾನ ಪರಿಷತ್ ನಲ್ಲಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಧರ್ಮದಾಯ ವಿಧೇಯಕ ತಿರಸ್ಕೃತಗೊಂಡಿದೆ. ಈ ಮೂಲಕ ಆಡಳಿತ ರೂಡ ಕಾಂಗ್ರೆಸ್, ತೀವ್ರ ಮುಖಭಂಗ ಅನುಭವಿಸುವಂತಾಗಿದೆ.