ಬೆಂಗಳೂರು – ಕಾಂಗ್ರೆಸ್ ಅಂದರೆ ಹೈಕಮಾಂಡ್ ಸಂಸ್ಕೃತಿಯ ಪಕ್ಷ.ಯಾವುದೇ ತೀರ್ಮಾನವಾಗಬೇಕಿದ್ದರೂ ಶಂಖದಿಂದ ತೀರ್ಥ ಎಂಬಂತೆ ಹೈಕಮಾಂಡ್ ನಿಂದಲೇ ಬರಬೇಕು. ರಾಜ್ಯ ಮಟ್ಟದಲ್ಲಿ ನಾಯಕರು ಎಷ್ಟೇ ದೊಡ್ಡವರಾದರೂ ಹೈಕಮಾಂಡ್ ಆದೇಶಕ್ಕೆ ಕಾಯಲೇಬೇಕು.
ಆದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಮಾತ್ರ ಇದಕ್ಕೆ ತದ್ವಿರುದ್ಧ ಎಂಬ ಆಪಾದನೆ ಕೇಳಿಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷ ಪ್ರಕ್ರಿಯೆ ಆರಂಭಿಸಿದ್ದು ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಇವುಗಳನ್ನು ಪಕ್ಷದ ಪರಿಶೀಲನಾ ಸಮಿತಿ ಪರಾಮರ್ಶಿಸಿ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಲಿದೆ.ಹೈಕಮಾಂಡ್ ಇದನ್ನು ಪರಿಶೀಲಿಸಿ ಅಂತಿಮವಾಗಿ ಆಯ್ಕೆ ಪಟ್ಟಿ ಪ್ರಕಟಿಸಲಿದೆ.
ಇದು ಕಾಂಗ್ರೆಸ್ ರೂಪಿಸಿರುವ ನಿಯಮ. ಆದರೆ ಇದಕ್ಕೆ ತದ್ವಿರುದ್ಧವಾಗಿ ಸಿದ್ದರಾಮಯ್ಯ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಕೊಪ್ಪಳ ತಾಲ್ಲೂಕಿನ ವನಬಳ್ಳಾರಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಪ್ಪ ಅವರ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಅಲ್ಲಿ ಇವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಕೆಲವು ಕಿವಿಮಾತು ಹೇಳಿದರು. ಕೊಪ್ಪಳ ಕ್ಷೇತ್ರದಲ್ಲಿ ರಾಘವೇಂದ್ರ ಹಿಟ್ನಾಳ, ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ, ಕನಕಗಿರಿಯಲ್ಲಿ ಶಿವರಾಜ್ ತಂಗಡಗಿ, ಕುಷ್ಟಗಿಯಲ್ಲಿ ಅಮರೇಗೌಡ ಭಯ್ಯಾಪುರ, ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ ಅವರನ್ನು ಗೆಲ್ಲಿಸುವ ಹೊಣೆಗಾರಿಗೆ ನಿಮ್ಮದು ಎಂದು ಹೇಳಿದರು
ಜಿಲ್ಲೆಯ ಐದು ಕ್ಷೇತ್ರದಲ್ಲಿ ಸಹ ಕಾಂಗ್ರೆಸ್ ಜಯಭೇರಿ ಬಾರಿಸಬೇಕು ಜಿಲ್ಲೆಯಿಂದ ನಮಗೆ ಪೂರ್ಣ ಬೆಂಬಲ ನೀಡಿ, ಜಿಲ್ಲೆಯ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಿಕೊಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ನಡುವೆ ಗಂಗಾವತಿ ಕ್ಷೇತ್ರದಿಂದ ಪೈಪೋಟಿ ನಡೆದಿತ್ತು. ಮೂವರೂ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಸೋಮವಾರಕ್ಕೂ ಮೊದಲೇ ಸಿದ್ದರಾಮಯ್ಯ ಅವರು ಅವರು ‘ಇಕ್ಬಾಲ್ ಅನ್ಸಾರಿ ಗಂಗಾವತಿ ಕ್ಷೇತ್ರದ ಅಭ್ಯರ್ಥಿ’ ಎಂದು ಘೋಷಿಸಿದ್ದಾರೆ.
ಇದು ಇದೀಗ ವಿವಾದವಾಗಿ ಪರಿಣಮಿಸಿದೆ. ಈ ಹಿಂದೆ ಕೂಡಾ ಸಿದ್ದರಾಮಯ್ಯ ತುಮಕೂರಿನಲ್ಲಿ ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸಿದ್ದರು. ಆಗ ಹೈಕಮಾಂಡ್ ಈ ರೀತಿ ಮಾಡದಂತೆ ಕಿವಿಮಾತು ಹೇಳಿತ್ತು. ಆದರೂ ಇದೀಗ ಮತ್ತೊಮ್ಮೆ ಅಭ್ಯರ್ಥಿ ಹೆಸರು ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಈಗ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ನನಗೂ ಇಲ್ಲ, ಸಿದ್ದರಾಮಯ್ಯ ಅವರಿಗೂ ಇಲ್ಲ. ಆ ಅಧಿಕಾರ ಏನಿದ್ದರೂ ಎಐಸಿಸಿಗೆ ಇದೆ. ಯಾವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲಿರುವವರಿಗೆ ಉತ್ತೇಜನ ನೀಡಲು ಹೇಳಿರಬಹುದು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಹೈಕಮಾಂಡ್ ಗೆ ಮಾತ್ರ ಅಭ್ಯರ್ಥಿ ತೀರ್ಮಾನಿಸುವ ಅಧಿಕಾರ ಇದೆ ‘ ಎಂದು ತಿಳಿಸಿದರು.
Previous Articleಬಗೆದಷ್ಟು ಆಳ ಈ ಅಕ್ರಮದ ಚಿಲುಮೆ
Next Article ಆಟೋ ರಿಕ್ಷಾ ಸ್ಪೋಟಕ್ಕೆ ಬೆಂಗಳೂರು ಲಿಂಕ್