ಬೆಂಗಳೂರು,ಜ.23-
ಉತ್ತರ ಭಾರತದ ನಂತರ ಕರ್ನಾಟಕದತ್ತ ಗಮನ ಹರಿಸಿರುವ ಆಮ್ ಆದ್ಮಿ ಪಾರ್ಟಿ ಇದಕ್ಕಾಗಿ ರಣತಂತ್ರ ರೂಪಿಸತೊಡಗಿದೆ.ಇಲ್ಲಿಯವರೆಗೆ ಪಕ್ಷವನ್ನು ಮುನ್ನಡೆಸಿದ ಕೆಲವು ಪದಾಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೆ ಪಕ್ಷದ ನಿಧಿಯನ್ನು ದುರ್ಬಳಕೆ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯದ ಎಲ್ಲಾ ಘಟಕಗಳನ್ನು ವಿಸರ್ಜಿಸಲಾಗಿತ್ತು.
ಇದೀಗ ರಾಜ್ಯ ಘಟಕವನ್ನು ಪುನರ್ ಸ್ಥಾಪಿಸಿದ್ದು, ಆರೋಪಿತರಿಗೆ ಹಾಗೂ ಅದಕ್ಷರಿಗೆ ಖೊಖ್ ನೀಡಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿಯವರನ್ನು ಮುಂದುವರೆಸಲಾಗಿದೆ.
ಪಕ್ಷದ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರು ರಾಜ್ಯದ ನೂತನ ಘಟಕ ಹಾಗೂ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ವಾರ ರಾಜ್ಯ ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಗ್ರಾಮ ಸಂಪರ್ಕ ಅಭಿಯಾನದಿಂದ ಆಮ್ ಆದ್ಮಿ ಪಾರ್ಟಿಗೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರಕಿದ್ದು ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು, ರಾಜಕೀಯ ಹೋರಾಟಗಾರರು ಸಿಕ್ಕಿದ್ದಾರೆ. ಅವರಿಗೆ ಸಂಘಟನೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಪಕ್ಷದ ಪ್ರಚಾರ ಹಾಗೂ ಜನ ಸಂಪರ್ಕ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಮಾಧ್ಯಮ ಹಾಗೂ ಸಂವಹನ ಮುಖ್ಯಸ್ಥರಾಗಿ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಅವರನ್ನು ನೇಮಿಸಲಾಗಿದೆ.
ಕಾರ್ಯಾಧ್ಯಕ್ಷರುಗಳನ್ನಾಗಿ ಬಿ.ಟಿ.ನಾಗಣ್ಣ, ಮೋಹನ್ ದಾಸರಿ,ರವಿಚಂದ್ರ ನರಬೆಂಚಿ, ಶಿವರಾಯಪ್ಪ, ಜೋಗಿನ್ ಜಾಫರ್ ಮೊಯಿನುದ್ದೀನ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಜನರು ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಬಯಸುವ ಉತ್ತಮ ವ್ಯಕ್ತಿಗಳಾಗಿದ್ದಾರೆ. ಕರ್ನಾಟಕವು ಎಎಪಿ ಮೇಲೆ ವಿಶ್ವಾಸವಿಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಅದರ ಬೆಂಬಲದಿಂದಾಗಿ ಆಮ್ ಆದ್ಮಿ ಪಾರ್ಟಿಯು ವಿಜಯದತ್ತ ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Previous Articleಕೇಸ್ ಮುಚ್ಚಿ ಹಾಕಲು ಲಂಚ ಕೇಳಿದ CID ಅಧಿಕಾರಿ.
Next Article BJPಯವರು ಕಡಲೆಕಾಯಿ ತಿನ್ನುತ್ತಿದ್ದರಾ..?