ಬೆಂಗಳೂರು,ಆ.1- ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿದೆ. ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು,
ಅ ಸಂಪ್ರದಾಯಿಕ ಇಂಧನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಶೀಘ್ರವೇ ಪ್ರತ್ಯೇಕ ಇಂಧನ ನೀತಿ ರೂಪಿಸುವುದಾಗಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಸಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡುವ ಮೂಲಕ ವಿದ್ಯುತ್ ದರವನ್ನು ಕಡಿಮೆ ಮಾಡಿ ಗ್ರಾಹಕರ ಹೊರೆಯನ್ನು ತಗ್ಗಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅವಕಾಶಗಳಿವೆ. ಜೊತೆಗೆ ವಿದ್ಯುತ್ ಉಪ ಸ್ಥಾವರದ ಬಳಿ 5ರಿಂದ 10 ಎಕರೆ ಪ್ರದೇಶದಲ್ಲಿ 10 ಮೆಗಾವ್ಯಾಟ್‍ವರೆಗೂ ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಅಲ್ಲಿಯೇ ಉತ್ಪಾದಿಸುವ ವಿದ್ಯುತ್‍ನ್ನು ಉಪ ಸ್ಥಾವರಕ್ಕೆ ಸಂಪರ್ಕ ಕಲ್ಪಿಸಿದರೆ ಸೋರಿಕೆ ಸರಬರಾಜು ನಷ್ಟ ತಪ್ಪಲಿದೆ ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ ಎಂದು ವಿವರಿಸಿದರು.
ಪಾವಗಡದಲ್ಲಿ ರೈತರ ಜಮೀನನ್ನು ಭೋಗ್ಯಕ್ಕೆ ಪಡೆದು ಸೋಲಾರ್ ಪಾರ್ಕ್ ನಿರ್ಮಸಲಾಗಿದೆ. ಅಲ್ಲಿನ ರೈತರು ಉತ್ಸಾಹ ತೋರಿಸಿದ್ದು, ಸೋಲಾರ್ ಪಾರ್ಕ್ ವಿಸ್ತರಣೆಗಾಗಿ ಹೆಚ್ಚುವರಿ 10 ಸಾವಿರ ಎಕರೆಯನ್ನು ನೀಡಲು ಮುಂದೆ ಬಂದಿದ್ದಾರೆ. ಇದೇ ಮಾದರಿಯಲ್ಲಿ ಉಪಸ್ಥಾವರದ ಸಮೀಪ ರೈತರ ಜಮೀನುಗಳನ್ನು ಭೋಗ್ಯಕ್ಕೆ ಪಡೆದು ಸೌರ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪವನಶಕ್ತಿ ಉತ್ಪಾದನೆಗೆ ಇದರಿಂದ ಅನುಕೂಲವಾಗಲಿದೆ. ಜಲ ವಿದ್ಯುತ್ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿದೆ. ಅದರ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿನ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಲು ಬಿಡದಿ ಬಳಿ ಬಿಬಿಎಂಪಿ ಸಹಯೋಗದಲ್ಲಿ ಘಟಕ ನಿರ್ಮಿಸಲಾಗಿದೆ.ಬರುವ ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಇದು ಯಶಸ್ವಿಯಾದರೆ ಉಳಿದ ಸ್ಥಳೀಯ ಸಂಸ್ಥೆಗಳಲ್ಲೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಆದ್ಯತೆ ನೀಡಲಾಗುವುದು. ಇದರಿಂದ ಕಸದ ಸಮಸ್ಯೆ ನಿವಾರಣೆಯಾಗಲಿದೆ ಜೊತೆಗೆ ವಿದ್ಯುತ್ ಬಿಕ್ಕಟ್ಟು ಇತ್ಯರ್ಥ ವಾಗಲಿದೆ ಎಂದು ಹೇಳಿದರು ಬಿಡದಿಯ ಘಟಕದಲ್ಲಿ 11 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗಲಿದೆ. ಪ್ರತಿ ಯೂನಿಟ್‍ಗೆ 8 ರೂ. ವೆಚ್ಚ ತಗುಲಿದೆ ಅಸಂಪ್ರದಾಯಿಕ ಮೂಲಗಳಾದ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರತ್ಯೇಕ ನೀತಿ ರೂಪಿಸಲಾಗುತ್ತಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಹಸಿರು ಇಂಧನಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದೆ. ಹಿಂಡ್ ಹೈಡ್ರೋವನ್ನು ಅಮೋನಿಯಾವಾಗಿ ಪರಿವರ್ತಿಸಿ ಸಂಗ್ರಹಿಸಿ ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ಎಲ್ಲ ಉಪಕ್ರಮಗಳಿಂದ ಭವಿಷ್ಯದಲ್ಲಿ ಗ್ರಾಹಕರಿಗೆ ವಿದ್ಯುತ್ ಹೊರೆ ತಗ್ಗಲಿದೆ. ಕೈಗಾರಿಕೋದ್ಯಮಿಗಳು ಮುಂದೆ ಬಂದರೆ ಸೌರಶಕ್ತಿ ಉತ್ಪಾದನೆಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಗೃಹಜ್ಯೋತಿ:
ರಾಜ್ಯ ಸರ್ಕಾರದ ಗ್ಯಾರಂಟಿ ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 1.43 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಜುಲೈ 1ರಿಂದ ಬಳಕೆಯಾಗುತ್ತಿರುವ ವಿದ್ಯುತ್‍ಗೆ ಯೋಜನೆ ಅನ್ವಯವಾಗುತ್ತಿದ್ದು, 200 ಯೂನಿಟ್ ಒಳಗೆ ಬಳಕೆದಾರರು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದೇ 5ರಂದು ಕಲಬುರಗಿಯಲ್ಲಿ ಯೋಜನೆ ಉದ್ಘಾಟಿಸಲಾಗುತ್ತಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಗಡುವು ಇಲ್ಲ. ಜುಲೈ 27 ರವರೆಗೆ ನೋಂದಾಯಿಸಿಕೊಡಿರುವವರು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಪಡೆಯುತ್ತಾರೆ. ಇನ್ನೂ ನೋಂದಣಿ ಮಾಡಿಕೊಳ್ಳದ ಗ್ರಾಹಕರು ಈಗಲೂ ನೋಂದಣಿ ಮಾಡಿಕೊಂಡು ಗೃಹಜ್ಯೋತಿಯ ಲಾಭ ಪಡೆಯಬಹುದಾಗಿದೆ
ಯಾವ ತಿಂಗಳ ಅರ್ಜಿ ಸಲ್ಲಿಸುತ್ತಾರೋ ಅದರ ಮುಂದಿನ ತಿಂಗಳಿಂದ ಯೋಜನೆಯ ಲಾಭ ಸಿಗುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಜಾರಿಯಲ್ಲಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ 40 ಯೂನಿಟ್‌ನಿಂದ 53 ಯೂನಿಟ್ ಉಚಿತ ವಿದ್ಯುತ್, ಅಮೃತ ಜ್ಯೋತಿಗೆ 75 ಯೂನಿಟ್‌ಗೆ ಜತೆಗೆ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದರು.
ಗೃಹಜ್ಯೋತಿ ಯೋಜನೆಯಿಂದ ಇಂಧನ ಇಲಾಖೆ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ. ಉಚಿತ ವಿದ್ಯುತ್‌ನ ಬಿಲ್ ಮೊತ್ತವನ್ನು ಸರ್ಕಾರ ಇಂಧನ ಇಲಾಖೆಗೆ ಪಾವತಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿ, ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂದರು