ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಏಳು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.ಈ ಸಂಬಂಧ ಬೀದರ್, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ
ಪ್ರತ್ಯೇಕ ಮಸೂದೆಗಳನ್ನು ಜಾರಿಗೊಳಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2022 ಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರಕಿದೆ.
ಸದನದಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಏಳು ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಬೇಡಿಕೆ ಇತ್ತು. ಬಜೆಟ್‌ನಲ್ಲೂ ಘೋಷಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳ ಸಬಲೀಕರಣವಾಗಲಿದ್ದು, ಮುಂಬರುವ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಎಂದು ಹೇಳಿದರು.
ಪ್ರತಿಯೊಂದು ವಿಶ್ವವಿದ್ಯಾಲಯಕ್ಕೆ ತಲಾ ₹2 ಕೋಟಿಯಂತೆ ವಾರ್ಷಿಕ ಆವರ್ತಕ ವೆಚ್ಚ ವರ್ಷವೊಂದಕ್ಕೆ ₹14 ಕೋಟಿ ವೆಚ್ಚವಾಗುತ್ತದೆ ಎಂದು ಅವರು ಹೇಳಿದರು. ಮಂಡ್ಯದ ಸರ್ಕಾರಿ ಮಹಾವಿದ್ಯಾಲಯವನ್ನು (ಸ್ವಾಯತ್ತ) ಏಕೀಕೃತ ವಿಶ್ವವಿದ್ಯಾಲಯವೆಂದು 2019 ರಲ್ಲಿ ಮಾಡಲಾಗಿತ್ತು. ಈಗ ಮಸೂದೆಯ ಮೂಲಕ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಮಾರ್ಪಾಡು ಮಾಡಲಾಗಿದೆ ಎಂದರು.
ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ನೀಡಲು ಹೊಸ ಕಾನೂನು ತರಲಾಗುವುದು. ವಿಶ್ವವಿದ್ಯಾಲಯ ಕಾಯ್ದೆ ಮಾಡಿ 22 ವರ್ಷಗಳು ಕಳೆದಿವೆ. ಅದನ್ನು ಬದಲಿಸಲು ಮಸೂದೆಯನ್ನು ಮಂಡಿಸಲಾಗುವುದು. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಮತ್ತು ಸವಾಲುಗಳಿಗೆ ಅದರಲ್ಲಿ ಪರಿಹಾರವಿದೆ. ಇದು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ನಂತರ ಚರ್ಚೆಯ ಬಳಿಕ ಸದನದಲ್ಲಿ ಮಸೂದೆಗೆ ಧ್ವನಿ ಮತದ ಅಂಗೀಕಾರ ದೊರಕಿತು.
Previous Articleಚಿರತೆ ಚರ್ಮ ಮಾರುತ್ತಿದ್ದ ಗ್ಯಾಂಗ್ ಅಂದರ್
Next Article PayCM-ಹೆಸರು ಕೆಡಿಸಲು ಮಾಡಿದ ಪಿತೂರಿ