ಬೆಂಗಳೂರು, ಜ.23- ಲೋಕಸಭಾ Electionಗೆ ಸಜ್ಜಾಗುತ್ತಿರುವ ಸಮಯದಲ್ಲಿ ಕಾರ್ಯಕರ್ತರನ್ನು ಗುರುತಿಸಲು ನಡೆಸಲಾಗಿದ್ದ ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆ ಇದೀಗ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ರಾಜ್ಯದ ನಾಯಕರು ಹಲವು ಸುತ್ತಿನ ಸಭೆ ನಡೆಸಿ ಅಂತಿಮಗೊಳಿಸಿದ ಪಟ್ಟಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಕೆಲ ಹೆಸರುಗಳು ಸೇರ್ಪಡೆಯಾಗಿವೆ.
ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ
ಕೆಲಸ ಮಾಡಿದ್ದ ನವೀನ್ ಎಂಬ ವ್ಯಕ್ತಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಕಾರಣವಾಗಿದೆ.
ಇದರ ಜೊತೆಗೆ ಕಲಬುರಗಿಯ ಕೆಲವರು ಪಟ್ಟಿಯಲ್ಲಿ ನುಸುಳಿರುವುದು ಕೂಡಾ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಲ್ಲಿ ಅಚ್ಚರಿ ಮೂಡಿಸಿದ್ದು,ಪಟ್ಟಿಯನ್ನು ಆದೇಶದ ಮೂಲಕ ಪ್ರಕಟಿಸಲು ನಿರಾಕರಿಸಿದ್ದಾರೆ.
ಆದರೆ,ಹೈಕಮಾಂಡ್ ನಿಂದ ಶೀಘ್ರವಾಗಿ ಆದೇಶ ಹೊರಡಿಸುವಂತೆ ಸೂಚನೆ ಬಂದಿದೆ.ಇದನ್ನು ಪಾಲಿಸಲು ರಾಜ್ಯದ ನಾಯಕರು ನಿರಾಕರಿಸಿದ್ದು ಬಿಕ್ಕಟ್ಟು ಸೃಷ್ಟಿಯಾಗಿದೆ.ಸರ್ಕಾರದ ಆದೇಶ ಹೊರಬೀಳುವ ಮುನ್ನ ತಮ್ಮ ಗಮನಕ್ಕೂ ಬಾರದೆ,ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಪರಿಹರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸರ್ಜೇವಾಲಾ ಮಧ್ಯಪ್ರವೇಶ ಮಾಡಿದ್ದಾರೆ.
ವಾರಾಂತ್ಯಕ್ಕೆ ಅವರು ಬೆಂಗಳೂರಿಗೆ ಬರುತ್ತಿದ್ದು, ಸಿ ಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.