ಬೆಂಗಳೂರು,ಜೂ.3-ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು
ಡ್ರಗ್ ಪೆಡ್ಲಿಂಗ್‍ನಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿ 45 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಬಂಧಿತ ನೈಜೀರಿಯಾ ಪ್ರಜೆಯಿಂದ 35 ಸಾವಿರ ನಗದು 35 ಲಕ್ಷ ಬೆಲೆಯ 221 ಗ್ರಾಂ 586 ಎಂಡಿಎಂಎ ಎಕ್ಸ್ ಟೆನ್ಸಿ ಮಾತ್ರೆಗಳು,10 ಲಕ್ಷ ಬೆಲೆಯ ಟಯೋಟಾ ಕಾಮ್ರೆ ಕಾರು, ಎರಡು ಮೊಬೈಲ್ ಗಳು,ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಮೂರು ವರ್ಷಗಳ ಹಿಂದೆ ವ್ಯಾಪಾರಿ ವೀಸಾದಲ್ಲಿ ನಗರಕ್ಕೆ ಬಂದು ಹೆಚ್ಚಿನ ಹಣವನ್ನು ಸುಲಭವಾಗಿ ಗಳಿಸಲು ದೆಹಲಿಯಲ್ಲಿ ನೆಲೆಸಿರುವ ನೈಜೀರಿಯಾ ಮೂಲದ ಪರಿಚಯಸ್ಥ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ನಗರಕ್ಕೆ ಆರೋಪಿಯು ಕಳ್ಳ ಸಾಗಾಣೆ ಮಾಡಿಕೊಂಡು ಬರುತ್ತಿದ್ದ.
ಮಾರತ್ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಚಯಸ್ಥ ಗಿರಾಕಿಗಳು,ಐಟಿಬಿಟಿ ಉದ್ಯೋಗಿಗಳು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಎಂಡಿಎಂಎ ಎಕ್ಸ್ ಟೆನ್ಸಿ ಮಾತ್ರೆಯನ್ನು 5ರಿಂದ 6 ಸಾವಿರ ರೂಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ಆರೋಪಿಯು ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.