ಬೆಂಗಳೂರು.ಜ,24 – ಮುಂಬರುವ ಲೋಕಸಭಾ Electionಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಗಳಿಸಬೇಕಾದರೆ ಹೆಚ್ಚುವರಿಯಾಗಿ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ನಾಯಕರು ಹಿಡಿದಿದ್ದ ಬಿಗಿಪಟ್ಟು ಸಡಿಲಗೊಂಡಿದೆ.
ಹಾಲಿ ಇರುವ ಉಪ ಮುಖ್ಯಮಂತ್ರಿ ಜೊತೆಗೆ ಪರಿಶಿಷ್ಟ ಜಾತಿ, ವರ್ಗ ಮತ್ತು ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಮಾನ್ಯತೆ ನೀಡುವ ದೃಷ್ಟಿಯಿಂದ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂದು ಮಂಡಿಸಲಾಗಿದ್ದ ಬೇಡಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಆಡಳಿತ ರೂಢ ಕಾಂಗ್ರೆಸ್ ನಲ್ಲಿ ಇದು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು.ಸತೀಶ್ ಜಾರಕಿಹೊಳಿ ನೇತೃತ್ವದ ಬಣ ಇದಕ್ಕಾಗಿ ನಡೆಸಿದ ಪ್ರಕ್ರಿಯೆ ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈ ಕಟ್ಟಿ ಹಾಕುವ ತಂತ್ರ ಎಂದು ವ್ಯಾಖ್ಯಾನ ಮಾಡಲಾಗಿತ್ತು.
ಈ ಕುರಿತಾಗಿ ನಡೆಯುತ್ತಿದ್ದ ವಿದ್ಯಮಾನಗಳು ಪಕ್ಷದಲ್ಲಿ ಗೊಂದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ನಡೆಸಿದ ಪ್ರಮುಖ ನಾಯಕರು ಸದ್ಯಕ್ಕೆ ಹೈಕಮಾಂಡ್ ಮುಂದೆ ಈ ಬೇಡಿಕೆ ಸಲ್ಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಗೊತ್ತಾಗಿದೆ.
ಈ ನಡುವೆ,ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸದ್ಯ ನಮ್ಮ ಎಲ್ಲರ ಗಮನ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದಾಗಿದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತಾದ ಯಾವುದೇ ಬೇಡಿಕೆಯನ್ನು ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅವಕಾಶ ವಂಚಿತ ಸಮುದಾಯಗಳಿಗೆ ಉನ್ನತ ಹುದ್ದೆ ಸಿಗಬೇಕು ಎನ್ನುವದು ನಮ್ಮ ಬೇಡಿಕೆಯಾಗಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗಾಗಿ ಆಗ್ರಹ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂತ್ರಿಗಳನ್ನು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿದೆ ಇದಕ್ಕೆ ಮಾಜಿ ಮಂತ್ರಿ ಪ್ರಕಾಶ್ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಅವರು ನನ್ನ ಜೊತೆಗೂ ಮಾತನಾಡಿದ್ದಾರೆ ಪಕ್ಷದ ಪ್ರಮುಖರಿಗೂ ತಮ್ಮ ಅಭಿಪ್ರಾಯ ರವಾನಿಸಿದ್ದಾರೆ. ಎಲ್ಲವೂ ಪಕ್ಷದ ಆಂತರಿಕ ವಿದ್ಯಮಾನಗಳಾಗಿದ್ದು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ.ಈ ಬಾರಿ ರಾಜ್ಯದಿಂದ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಹೆಬ್ಬಾಳ್ಕರ್ ಅರ್ಜಿ:
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡುವಂತೆ ಕೇಳಿ ಅರ್ಜಿ ಸಲ್ಲಿಸಿದ್ದಾರೆ.ಈ ಕುರಿತಂತೆ ಅವರು ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ.ಇದರ ಜೊತೆಯಲ್ಲಿ ಇನ್ನು ಎರಡು ಮೂರು ಹೆಸರುಗಳು ಪರಿಶೀಲನೆಯಲ್ಲಿದ್ದು ಅವುಗಳನ್ನು ಹೈಕಮಾಂಡ್ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹೈಕಮಾಂಡ್ ಈ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ, ಸಮೀಕ್ಷೆ ಮಾಡಲಿದೆ. ಸಮೀಕ್ಷೆಯಲ್ಲಿ ಯಾರ ಪರವಾಗಿ ಹೆಚ್ಚು ಒಲವು ಸಿಗಲಿದೆಯೋ ಅವರಿಗೆ ಟಿಕೆಟ್ ಸಿಗಲಿದೆ.ಈ ಕುರಿತಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
ಶೆಟ್ಟರ್ ಪಕ್ಷ ಬಿಡೋಲ್ಲ:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮಗೆ ಬಿಜೆಪಿಯಲ್ಲಿ ಸೂಕ್ತ ಗೌರವ ಮತ್ತು ಸ್ಥಾನಮಾನ ಸಿಗಲಿಲ್ಲ ಎಂದು ಬೇಸರಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಇವರಿಗೆ ಇಲ್ಲಿ ಸ್ಥಾನಮಾನದ ಜೊತೆಗೆ ಗೌರವವನ್ನು ನೀಡಲಾಗುತ್ತಿದೆ ಹೀಗಾಗಿ ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳು ಪೂರ್ಣಗೊಂಡಿದೆ. ಹೀಗಾಗಿ ನಿಗಮ ಮಂಡಳಿಗಳನ್ನು ನೇಮಕ ಮಾಡುವ ಮೂಲಕ ಕಾರ್ಯಕರ್ತರಿಗೆ ಅಧಿಕಾರ ಕೊಡಬೇಕು ಈ ವಿಷಯದಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ನಮ್ಮ ಜಿಲ್ಲೆಯಲ್ಲಿ ಯಾರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು.ಪಕ್ಷ ಸಂಘಟನೆಗೆ ಯಾರ ಕೊಡುಗೆ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇದೆ ಅದನ್ನು ಆಧರಿಸಿ ಅಂತಹವರಿಗೆ ಅಧಿಕಾರ ನೀಡುವಂತೆ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದೇವೆ ಆದರೆ ಅದರಲ್ಲಿ ಕೆಲವು ಹೆಸರುಗಳು ಕೈ ಬಿಡಲಾಗಿದೆ ಎಂಬ ಮಾಹಿತಿ ಇದೆ ಅದನ್ನು ಸರಿಪಡಿಸುವಂತೆ ಹೇಳಿದ್ದೇವೆ ಆದಷ್ಟು ಶೀಘ್ರ ಎಲ್ಲವೂ ಬಗೆಹರಿಯಲಿದೆ ಎಂಬ ಅವಿಶ್ವಾಸ ವ್ಯಕ್ತಪಡಿಸಿದರು.