ಮೈಸೂರು,ಡಿ.16 – ಸಂಸತ್ ಕಲಾಪದ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಭವಿಸಿದಂತೆ ಬಂಧಿತ ಮೈಸೂರಿನ ಮನೋರಂಜನ್ ಕುಟುಂಬಸ್ಥರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಎರಡು ದಿನಗಳ ಹಿಂದಷ್ಟೇ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು, ಕುಟುಂಬದ ಯಾರೂ ಕೂಡಾ ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಸೂಚನೆ ನೀಡಿದ್ದಾರೆ.
ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ ಮೇಲೆ ತೆರಳಿ. ಮನೆಗೆ ಯಾವ ಸಂಬಂಧಿಕರಿಗೂ ಸದ್ಯಕ್ಕೆ ಬಾರದಂತೆ ಸೂಚನೆ ಕೊಡಿ. ಪ್ರತಿ ನಿತ್ಯ ನಿಮಗೆ ಬರುವ ಕರೆಗಳ ಮಾಹಿತಿಯನ್ನು ಕಡ್ಡಾಯವಾಗಿ ನಮಗೆ ತಿಳಿಸಿ. ಎಲ್ಲಾ ಕರೆಗಳನ್ನು ತಪ್ಪದೆ ಸ್ವೀಕರಿಸಬೇಕು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್ ಕುಟುಂಬದವರಿಗೆ ಸೂಚಿಸಿದ್ದಾರೆ.
ಮುಂದಿನ ಸೂಚನೆ ನೀಡುವ ವರೆಗೂ ಯಾವುದೇ ಪತ್ರಿಕೆ, ಹಳೆಯ ಪುಸ್ತಕ ಮಾರಾಟ ಮಾಡಬೇಡಿ ಎಂದು ಆರೋಪಿ ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಮನೋರಂಜನ್ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಸಮಯದಿಂದ ಮನೋರಂಜನ್ ಮನೆಯಲ್ಲಿ ತಪಾಸಣೆ ನಡೆಸಿ ಹಿಂದಿರುಗಿದ್ದರು.
ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಹಳದಿ ಅನಿಲದಿಂದ ತುಂಬಿರುವ ಡಬ್ಬಿಗಳನ್ನು ತೆರೆದು ಸ್ಪ್ರೇ ಮಾಡಿದ್ದರು. ಬಳಿಕ ಲೋಕಸಭೆ ಸಂಸದರು ಅವರನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಘಟನೆಯು ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಇದೀಗ ವಿವಿಧ ಆಯಾಮಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ಮನೆಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಶೋಧ ಕಾರ್ಯ ನಡೆಸಿದ್ದಾರೆ.
ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಮನೋರಂಜನ್ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಸ್ಮೋಕ್ ಬಾಂಬ್ ಸಾಗಿಸಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್‌ಗೆ ಪಾಸ್ ನೀಡಿದ್ದರಿಂದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿವೆ.
ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಬಂಧಿತರ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ಜೋರಾಗಿದೆ.