ಬೆಂಗಳೂರು – ಅನುದಾನ ಮತ್ತು ಆರ್ಥಿಕ ನೆರವು ಬಿಡುಗಡೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರ ನಡೆಸುತ್ತಿರುವ ದಿಲ್ಲಿ ಚಲೋ ಹೋರಾಟಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು ‘ಚಲೋ ದಿಲ್ಲಿ – Chalo Delhi’ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ‘ಚಲೋ ಹಳ್ಳಿ’ ಕಾರ್ಯಕ್ರಮ ಆರಂಭಿಸಿ ನಿಮ್ಮೊಂದಿಗೆ ನಾವೂ ಬರುತ್ತೇವೆ’ ಎಂದು ಹೇಳಿದ್ದಾರೆ.
ಸ್ವಾವಲಂಬಿ ಬಲಿಷ್ಠ ಭಾರತ ನಿರ್ಮಾಣ’ದ ಮಹಾ ಸಂಕಲ್ಪ ತೊಟ್ಟಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕರ್ನಾಟಕವೇ ಸ್ಫೂರ್ತಿ.ಅಣ್ಣ ಬಸವಣ್ಣ ನವರ ಕಾಯಕ ತತ್ವವೇ ಪ್ರೇರಣೆ. ಇದಕ್ಕೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಸಾಕ್ಷಿ ಸಂಕೇತವಾಗಿದೆ. ಸಮೃದ್ಧ ಕರ್ನಾಟಕ ಮೋದಿ ಜೀ ಅವರ ಆದ್ಯತೆಯಾಗಿರುವಾಗ ರಾಜ್ಯ ಕಾಂಗ್ರೆಸ್ ಹೋರಾಟ ರಾಜಕೀಯ ಪ್ರೇರಿತ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಳ್ಳಿಚಲೋ ಎಂಬ ಅಭಿಯಾನ ಆರಂಭಿಸಿರುವ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆರ್ಥಿಕ ಸಮತೋಲನ ಕಾಯ್ದು ಕೊಳ್ಳುವಲ್ಲಿ ವಿಫಲವಾಗಿ ಬೊಕ್ಕಸ ಬರಿದು ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ತೆರಿಗೆ ಬಾಕಿಯ ನೆಪ ಮಾಡಿಕೊಂಡು ಕೇಂದ್ರ ಸರ್ಕಾದ ವಿರುದ್ಧ ಪ್ರತಿಭಟಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.