ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024 ಥೀಮ್ ‘ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ’
ಹೆಣ್ಣು ಮನೆಯ ಕಣ್ಣು, ಜಗದ ಸೃಷ್ಟಿಕರ್ತೆಯೇ ಹೆಣ್ಣು, ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು ಮಾದರಿಯಾಗಿದ್ದಾರೆ, ಹುಟ್ಟಿನಿಂದ ಸಾಯುವ ತನಕ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತಿದ್ದಾಳೆ,
‘ತೊಟ್ಟಿಲನ್ನು ತೂಗುವ ಕೈ ದೇಶವನ್ನೇ ಆಳಬಲ್ಲದು’ ಎಂದು ತೋರಿಸಿ ಕೊಟ್ಟಿದ್ದಾಳೆ ಆದರೇ ಈಗ ಹೆಣ್ಣು ಮಕ್ಕಳು ಸಾಧನೆ ಮಾಡುವುದಿರಲಿ, ಭೂಮಿ ಮೇಲೆ ಜನಿಸುವುದಕ್ಕೂ ಕಂಟಕ ಎದುರಾಗುತ್ತಿದೆ. ಭ್ರೂಣದಲ್ಲಿಯೇ ಹೆಣ್ಣು ಎಂದು ತಿಳಿದರೆ ಸಾಕು ಹುಟ್ಟುವ ಮೊದಲೇ ಹೊಸಕಿ ಬಿಡುವ ವಿಷ ಜಂತುಗಳ ಸಂಖ್ಯೆ ಭೂಮಿ ಮೇಲೆ ಹೆಚ್ಚಾಗಿದ್ದು, ಭಾರತದಲ್ಲಿ ವರ್ಷ ಒಂದಕ್ಕೆ 4.60 ಲಕ್ಷ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಲಾಗುತ್ತದೆ ಎಂದು ವಿಶ್ವಸಂಸ್ಥೆಯೇ ವರದಿ ಮಾಡಿರುವುದೇ ಇದಕ್ಕೆ ಸಾಕ್ಷಿ.
ಕೆಲವು ಹೆಣ್ಣುಮಕ್ಕಳಿಗೆ ಹೇಳಿಕೊಳ್ಳುವಷ್ಟು ಸಮಾನ ಸ್ಥಾನಮಾನವ ಇವತ್ತಿಗೂ ದೊರೆಯುತ್ತಿಲ್ಲ. ಹೀಗಾಗಿ ಶಿಕ್ಷಣ, ಹೆಣ್ಣು ಭ್ರೂಣಹತ್ಯೆ, ಬಾಲ್ಯವಿವಾಹ, ಪೋಷಣೆ, ಕಾನೂನು ಹಕ್ಕುಗಳು, ಔಷಧೀಯ ಹಕ್ಕುಗಳ ಕೊರತೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ ಹಾಗೂ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 11 ರಂದು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಇತಿಹಾಸ
ಹೆಣ್ಣು ಮಕ್ಕಳ ದಿನವನ್ನು ಆಚರಿಸುವ ಅಭಿಯಾನವನ್ನು ಸರ್ಕಾರೇತರ ಸಂಸ್ಥೆಯಾದ ʼಪ್ಯಾನ್ ಇಂಟರ್ನ್ಯಾಷನಲ್ʼ ಸಂಸ್ಥೆಯು ಪ್ರಾರಂಭಿಸಿತು. ಈ ಅಭಿಯಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕೆನ್ನುವ ಸಲುವಾಗಿ ಈ ಸಂಸ್ಥೆ ಕೆನಡಾ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಕೆನಡಾ ಸರ್ಕಾರವು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುವ ಪ್ರಸ್ತಾಪವಿಟ್ಟಿತು. ವಿಶ್ವ ಸಂಸ್ಥೆಯು ಡಿಸೆಂಬರ್ 19, 2011 ರಂದು ಈ ನಿರ್ಣಯವನ್ನು ಅಂಗೀಕರಿಸಿತು. ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಆ ಬಳಿಕ 2012, ಅಕ್ಟೋಬರ್ 11 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024 ಥೀಮ್ ‘ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ’ ಎಂದು ಘೋಷಣೆ ಮಾಡಿದೆ.
ಭಾರತದಲ್ಲಿನ ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ, ಲಿಂಗ ಅಸಮಾನತೆ, ಮತ್ತು ಆರೋಗ್ಯ ಮತ್ತು ಶಿಕ್ಷಣ ಹಿಂಡುಯುವಿಕೆಯನ್ನು ತಡೆಯಲು ಹೆಣ್ಣು ಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿ 2024 ರಲ್ಲಿ ಈ ಥೀಮ್ ನೀಡಲಾಗಿದೆ.