ಬೆಂಗಳೂರು,ಮೇ.12- ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು ಓಎಂಆರ್ ಪ್ರತಿ ತಿದ್ದುಪಡಿ ಮಾಡಿದ ನೇಮಕಾತಿ ವಿಭಾಗದಲ್ಲಿದ್ದ
ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಲೋಕೇಶಪ್ಪರನ್ನು ಬಂಧಿಸಿದ್ದಾರೆ.
ಸ್ಟ್ರಾಂಗ್ ಕೊಠಡಿಯಲ್ಲಿದ್ದ ಒಎಂಆರ್ ಪ್ರತಿ ತಿದ್ದುಪಡಿಗೆ ಆರ್‌ಎಸ್‌ಐ ಲೋಕೇಶಪ್ಪ ಕಾರಣ ಎನ್ನುವುದು ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿರುವ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.
ಮತ್ತೊಂದೆಡೆ, 2017ರಲ್ಲಿ ನಡೆದ ಆರ್‌ಎಸ್‌ಐ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನೇಮಕಾತಿ ವಿಭಾಗದ ಸ್ಟ್ರಾಂಗ್ ಕೊಠಡಿಯ ಒಎಂಆರ್ ಪ್ರತಿ ತುಂಬಿದ್ದ ಬಾಕ್ಸ್ಗಳ ಭದ್ರತೆಗೆ ಬಂಧಿತ ಸಶಸ್ತ್ರ ಮೀಸಲು ಪಡೆಯ ಆರ್‌ಎಸ್‌ಐ ಲೋಕೇಶಪ್ಪರನ್ನು ನಿಯೋಜಿಸಲಾಗಿತ್ತು.
ಉತ್ತರ ಕರ್ನಾಟಕ ಮೂಲದ ಲೋಕೇಶಪ್ಪ ಹತ್ತು ವರ್ಷಗಳ ಕಾಲ ನಾಗರಿಕ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 2017-18ನೇ ಸಾಲಿನಲ್ಲಿ ಆರ್‌ಎಸ್‌ಐ ನೇಮಕಾತಿಯಲ್ಲಿ ಎರಡನೇ ರ‍್ಯಾಂಕ್ ಪಡೆದು ಆಯ್ಕೆಗೊಂಡಿದ್ದು, ಮಂಗಳೂರಿನಲ್ಲಿ ಪ್ರೊಬೇಷನರಿಯಾಗಿದ್ದರು. ಬಳಿಕ ನಗರದ ಸಿಎಆರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಡಿವೈಎಸ್ಪಿ ಶಾಂತಕುಮಾರ್ ಸಲಹೆ ಮೇರೆಗೆ ನೇಮಕಾತಿ ವಿಭಾಗಕ್ಕೆ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೋಕೇಶಪ್ಪನಿಗೆ ಸ್ಟ್ರಾಂಗ್ ಕೊಠಡಿಯ ನಿರ್ವಹಣೆ ಕೊಡಲಾಗಿತ್ತು. ಶಾಂತಕುಮಾರ್ ಕಡೆಯ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು ಯಾವ ಬಾಕ್ಸ್ನಲ್ಲಿ ಇಡಲಾಗಿದೆ, ಅವರ ರೋಲ್ ನಂಬರ್ ಏನು? ಎಂಬುದು ಲೋಕೇಶಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ, ಸ್ಟ್ರಾಂಗ್ ರೂಮ್‌ನಲ್ಲಿ ಕೆಲ ಅಭ್ಯರ್ಥಿಗಳು, ಕೋಚಿಂಗ್ ಸೆಂಟರ್‌ನ ಶಿಕ್ಷಕರು ಹಾಗೂ ಮಧ್ಯವರ್ತಿಗಳ ಮೂಲಕ ಒಎಂಆರ್ ಶೀಟ್‌ಗಳ ತಿದ್ದುಪಡಿ ಮಾಡಿಸುತ್ತಿದ್ದರು.
ಶಾಂತಕುಮಾರ್ ಸೂಚನೆ ಮೇರೆಗೆ ಲೋಕೇಶಪ್ಪ ಈ ಅವ್ಯವಹಾರ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿವೈಎಸ್ಪಿ ಶಾಂತಕುಮಾರ್ ಸಶಸ್ತ್ರ ಮೀಸಲು ಪಡೆಯಿಂದ ಬಂದಿದ್ದರಿಂದ ನೇಮಕಾತಿ ವಿಭಾಗದಲ್ಲಿ ತನ್ನ ಕೆಳಗಿರುವ ಅಧಿಕಾರಿ-ಸಿಬ್ಬಂದಿಯನ್ನು ಅದೇ ವಿಭಾಗದಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಆರ್‌ಎಸ್‌ಐ ಲೋಕೇಶಪ್ಪ, ಶ್ರೀನಿವಾಸ್ ಹಾಗೂ ಮುಖ್ಯ ಪೇದೆ ಲೋಕೇಶ್ ಅವರನ್ನು ನೇಮಿಸಿಕೊಂಡಿದ್ದಾರೆ. ಅದರಲ್ಲೂ, ಲೋಕೇಶಪ್ಪನ ಮೇಲೆ ಶಾಂತಕುಮಾರ್‌ಗೆ ಅಪಾರ ನಂಬಿಕೆ. ಹೀಗಾಗಿ ಸ್ಟ್ರಾಂಗ್ ಕೊಠಡಿಯ ಭದ್ರತೆ, ನಿರ್ವಹಣೆಗೆ ಲೋಕೇಶಪ್ಪನಿಗೆ ನೀಡಲಾಗಿತ್ತು ಎಂದು ಮೂಲಗಳಿಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಬಂಧನಕ್ಕೊಳಗಾದ ಎಫ್‌ಡಿಎ ಹರ್ಷ, ಆರ್‌ಎಸ್‌ಐ ಶ್ರೀನಿವಾಸ್, ಹೆಡ್ ಕಾನ್ಸ್ಟೇಬಲ್ ಲೋಕೇಶ್ ಮತ್ತು ಶ್ರೀಧರ್ ಜೊತೆಗೆ ಲೋಕೇಶಪ್ಪನ ಬಂಧನಕ್ಕೆ ಖೆಡ್ಡಾ ತೋಡಲಾಗಿತ್ತು. ಆದರೆ, ಶ್ರೀನಿವಾಸ್ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಲೋಕೇಶಪ್ಪ ಪರಾರಿಯಾಗಲು ಯತ್ನಿಸಿದ್ದ. ಆದರೂ ಸಿಐಡಿ ಪೊಲೀಸರು ತಡರಾತ್ರಿವರೆಗೂ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.