ನವದೆಹಲಿ: ‘ಅಗ್ನಿಪಥ’ ಯೋಜನೆಗೆ ಬಿಹಾರ ಹಾಗೂ ರಾಜಸ್ಥಾನದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಸೇನೆಗೆ ‘ಅಗ್ನಿವೀರರ’ (ಯೋಧರು) ನೇಮಕಾತಿ ನಡೆಸುವುದಾಗಿ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದಷ್ಟೇ ಪ್ರಕಟಿಸಿತ್ತು.
ಆದರೆ, ಉದ್ಯೋಗ ಭದ್ರತೆ ಮತ್ತು ಪಿಂಚಣಿ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು, ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.
ಬಿಹಾರದ ಆರಾ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.
ಮುಜಾಫರ್‌ಪುರದ ಚಕ್ಕರ್ ಮೈದಾನದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಬಸ್ ಹಾಗೂ ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನೂರಾರು ಯುವಕರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಪಟನಾದಿಂದ ಹೊರಟ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು 30 ನಿಮಿಷ ತಡೆದರು. ರೈಲಿನ ಬೋಗಿಯೊಂದಕ್ಕೆ ಬೆಂಕಿ ಹಚ್ಚಲು ಯತ್ನಿಸಿದರು.
ನಾಲ್ಕು ವರ್ಷಗಳ ಕರ್ತವ್ಯ ಅವಧಿಯ ಮಿತಿ ಮತ್ತು ಬಳಿಕ ಶೇಕಡ 25ರಷ್ಟು ಯೋಧರಿಗೆ ಮಾತ್ರ ಪೂರ್ಣಾವಧಿ ಸೇವೆಗೆ ಅವಕಾಶ ಕಲ್ಪಿಸುವ ಕ್ರಮದ ವಿರುದ್ಧ ಸೇನೆ ಸೇರುವ ಹಂಬಲವಿರುವ ಅಭ್ಯರ್ಥಿಗಳು ದನಿ ಎತ್ತಿದ್ದಾರೆ.
ಕರ್ತವ್ಯದ ಬಳಿಕ ಪ್ರತಿ ಅಗ್ನಿವೀರನಿಗೆ ಸುಮಾರು 11.71 ಲಕ್ಷ ರೂ. ನಿಧಿಯು ದೊರೆಯಲಿದೆ. ಅವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಮೊದಲ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ.
‘ಅಗ್ನಿಪಥ’ಕ್ಕೆ ಭಾರೀ ಅಡ್ಡಿ: ಬಿಹಾರ, ರಾಜಸ್ಥಾನದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
Previous Articleವಿವಾದ ಹುಟ್ಟುಹಾಕಿದ ನಟಿ ಸಾಯಿ ಪಲ್ಲವಿ ಹೇಳಿಕೆ
Next Article ಹೀಗೂ ಮಾಡ್ತಾರೆ ಕಳ್ಳತನ..!