ಬೆಂಗಳೂರು, ಮಾ.5- ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದಲ್ಲಿ ಮೂವರನ್ನು ಬಂಧಿಸಿದ ಬೆನ್ನಲ್ಲೇ ಮಂಡ್ಯದಲ್ಲಿ ನಡೆದ ಪ್ರಕರಣ ಒಂದರ ಸಂಬಂಧ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎರಡು ವರ್ಷದ ಹಿಂದೆ ಮಂಡ್ಯದ ಸಂಜಯ ವೃತ್ತದಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಮಂಡ್ಯ ತಾಲೂಕಿನ ಡನಾಯಕನಪುರ ರವಿ ಎಂಬವರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು
ಈ ಕುರಿತಾಗಿ ಕನ್ನಂಬಾಡಿ ಕುಮಾರ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿದ ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಉಪ್ಪರಕನಹಳ್ಳಿ ಆರಾಧ್ಯ, ಡಣಾಯಕನಪುರ ರವಿ ಅವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಪರಮೇಶ್ವರ್ ಮಂಡ್ಯದಲ್ಲಿ 2022 ನವೆಂಬರ್‌ನಲ್ಲಿ ಬಿಜೆಪಿಯ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಯಾಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಹಳೆಯ ಪ್ರಕರಣ ಈಗ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೇಲೆ ಪ್ರಕರಣ ಒಂದೇ ಅಲ್ಲವೇ. ಕಾನೂನು ಎಲ್ಲರಿಗೂ ಒಂದೇ. ಯಾವ ಸಂದರ್ಭದಲ್ಲಿ ಕೂಗಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿದೆ’ ಎಂದು ತಿಳಿಸಿದರು.
‘ಯುಎಪಿಎ ಪ್ರಕರಣಗಳು ನೇರವಾಗಿ ಕೇಂದ್ರದ ತನಿಖಾ ಸಂಸ್ಥೆಗಳಾದ ಎನ್‌ಐಎ ಅಥವಾ ಸಿಬಿಐಗೆ ಬರುತ್ತದೆ. ಹೀಗಾಗಿ ಎನ್‌ಐಎ ಅವರು ಸುಮೋಟೋ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಸಹ ತನಿಖೆ ಮುಂದುವರಿಸುತ್ತಾರೆ. ನಮ್ಮಲ್ಲಿರುವ ಮಾಹಿತಿಯನ್ನು ಎನ್‌ಐಎಗೆ ಹಂಚಿ ಕೊಳ್ಳಲಾಗುವುದು. ಪ್ರಕರಣ ನಡೆದ ಮರುದಿನ ಸಿಸಿಬಿ ಪೊಲೀಸರು ಸಹ ಜೈಲಿನಲ್ಲಿರುವರನ್ನು ವಿಚಾರಣೆ ನಡೆಸಿದ್ದರು. ಯಾರೇ ತನಿಖೆ ನಡೆಸಿದರು ಒಟ್ಟಾರೆಯಾಗಿ ಆರೋಪಿಯನ್ನು ಪತ್ತೆ ಹಚ್ಚುವುದಷ್ಟೆ ಮುಖ್ಯ’ ಎಂದು ತಿಳಿಸಿದರು.
ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರಕ್ಕೆ ಯಾಕೆ ಮುಜುಗರ ಆಗುತ್ತದೆ. ಸರ್ಕಾರ ಯಾರಿಗಾದರೂ ಪ್ರಾಯೋಜಕತ್ವ ನೀಡಿದೆಯೇ? ಅವನ್ಯಾರೋ ಕೂಗಿದ್ದಾನೆ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಯುತ್ತಿದ್ದೆವು. ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರಕ್ಕೆ ಮುಜುಗರ ಆಗುವಂಥದ್ದು ಏನೂ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡು ಒಳ್ಳೆ ಕೆಲಸ ಮಾಡಿದೆ. ಇದಕ್ಕೆ ಸರ್ಕಾರವನ್ನು ಪ್ರಶಂಶಿಸಬೇಕು’ ಎಂದು ಹೇಳಿದರು.
‘ವಿಧಾನಸೌಧದ ಭದ್ರತಾ ವೈಫಲ್ಯ ಇರುವುದು ಕಂಡು ಬಂದರೆ ಇಲಾಖೆಯ ಅಧಿಕಾರಿಗಳು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ. ಯಾರನ್ನೋ ಕೇಳಿ ಕೆಲಸ ಮಾಡುವ ಅಗತ್ಯತೆ ಇಲ್ಲ’ ಎಂದರು.