ಚಿತ್ರದುರ್ಗ,ನ.10-ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಪಾಲಾಗಿರುವ ಮುರುಘಾ ಶ್ರೀ ಬಾಲಕಿಯರನ್ನು ಕರೆಸಿಕೊಂಡು ವಿಕೃತ ನಡವಳಿಕೆ ತೋರಿರುವುದು ಆರೋಪಪಟ್ಟಿ (ಚಾರ್ಜ್ಶೀಟ್)ನಲ್ಲಿ ಬೆಳಕಿಗೆ ಬಂದಿದೆ.
ಮಠದ ನೆಲಮಾಳಿಗೆಯಲ್ಲಿದ್ದ ರಹಸ್ಯ ಬೆಡ್ರೂಮ್ಗೆ ಅಪ್ರಾಪ್ತ ಬಾಲಕಿಯರನ್ನು ಕರೆಸಿಕೊಂಡು ಹಿಂಸೆ ಕೊಟ್ಟು ಅತ್ಯಾಚಾರ ಎಸಗುತ್ತಿದ್ದ ಮುರುಘಾ ಶರಣರು ಬಳಿಕ ಮದ್ಯ ಸೇವಿಸಿ ಗಹಗಹಿಸಿ ನಗುತ್ತಾ ಹೀನಾಯವಾಗಿ ಬೈಯ್ಯುತ್ತಿದ್ದ ಎಂದು ಸಂತ್ರಸ್ತ ಬಾಲಕಿಯರು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿರುವುದು ಚಾರ್ಜ್ಶೀಟ್ ನಲ್ಲಿ ಉಲ್ಲೇಖಗೊಂಡಿದೆ.
ಶಿವಮೂರ್ತಿ ಮುರುಘಾ ಶರಣನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತ ಬಾಲಕಿಯರು ತಮ್ಮ ಮೇಲೆ ನಡೆದ ದೌರ್ಜನ್ಯ ಮತ್ತು ವಾರ್ಡನ್ ರಶ್ಮಿ ಅವರ ದಬ್ಬಾಳಿಕೆಯ ಬಗ್ಗೆ ತನಿಖಾಧಿಕಾರಿಗಳ ಎದುರು ವಿವರಿಸಿದ್ದಾರೆ.
ನಾನು ಮಠದಲ್ಲಿ ಇರುವಾಗ ರಶ್ಮಿ ಅವರು ನಮ್ಮನ್ನು ಸ್ವಾಮೀಜಿ ಕೊಠಡಿಗೆ ಕಳಿಸುತ್ತಿದ್ದರು. ಕೊಠಡಿ ಮುಂದಿನ ಬಾಗಿಲಿಗೆ ಸಿಸಿಟಿವಿ ಇರುವ ಕಾರಣ ಹಿಂದಿನ ಬಾಗಿಲಿನಿಂದ ಕಳಿಸುತ್ತಿದ್ದರು. ನನ್ನೊಂದಿಗೆ 10ಕ್ಕೂ ಹೆಚ್ಚು ಜನರು ಇದೇ ಮಾರ್ಗದಲ್ಲಿ ಸ್ವಾಮೀಜಿ ಕೊಠಡಿಗೆ ಹೋಗಿದ್ದೆವು’ ಎಂದು ಬಾಲಕಿಯೊಬ್ಬಳು ಹೇಳಿದ್ದಾಳೆ.
ಮಠದಲ್ಲಿದ್ದ ಕೆಲವರು ಸ್ವಾಮೀಜಿ ಮತ್ತು ರಶ್ಮಿಗೆ ಬೆಂಬಲ ಕೊಡುತ್ತಿದ್ದರು. ನಾವು ಹೋಗುವುದಿಲ್ಲ ಎಂದರೆ ಬೈಯುವುದು, ಹೊಡೆಯುವುದು, ತಳ್ಳುವುದು ಮಾಡುತ್ತಿದ್ದರು’ ಎಂದು ನೊಂದ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾಳೆ.
ಹಾಸ್ಟೆಲ್ನ ವಾರ್ಡನ್ ರಶ್ಮಿಗೆ ಮುರುಘಾ ಶ್ರೀ ಬಾಲಕಿಯರ ಹೆಸರಿನ ಪಟ್ಟಿ ಕೊಡುತ್ತಿದ್ದು, ಅದರಂತೆ ರಶ್ಮಿ ನಮ್ಮನ್ನು ಒಂಟಿಯಾಗಿ ಕೊಠಡಿಗೆ ಕಳಿಸುತ್ತಿದ್ದರು. ನಾವು ಹೋಗುವುದಿಲ್ಲ ಎಂದರೆ ಬೈದು, ಹೊಡೆಯುತ್ತಿದ್ದರು. ಸ್ವಾಮೀಜಿಯ ಗುಪ್ತ ಕೊಠಡಿಯಲ್ಲಿ ಮತ್ತು ಬರಿಸುವ ಚಾಕೊಲೇಟ್ ಇರುತ್ತಿತ್ತು. ಅದನ್ನು ತಿಂದಾಗ ಪ್ರಜ್ಞೆ ತಪ್ಪುತ್ತಿತ್ತು ಎಂದು ಬಾಲಕಿ ಹೇಳಿದ್ದಾಳೆ.
ಪ್ರತಿ ಭಾನುವಾರವೂ ಟ್ಯೂಷನ್ ನೆಪದಲ್ಲಿ ಜನರಲ್ ರೂಮ್ಗೆ ಹಾಸ್ಟೆಲ್ ಎಲ್ಲ ವಿದ್ಯಾರ್ಥಿನಿಯರನ್ನು ವಾರ್ಡನ್ ರಶ್ಮಿ ಕರೆಸಿಕೊಳ್ಳುತ್ತಿದ್ದರು. ಇಬ್ಬರನ್ನು ಮಾತ್ರ ಕಸ ಹೊಡೆಯಲು ಅಲ್ಲಿಯೇ ಇರಿಸಿಕೊಳುತ್ತಿದ್ದರು.
ಆಗ ನಾನೂ ಅಲ್ಲಿಯೇ ಇದ್ದೆ. ಸ್ವಾಮೀಜಿ ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫ್ರೂಟ್ಸ್ ಕೊಡುತ್ತಿದ್ದರು. ನನ್ನ ಮೇಲೆ ಸ್ವಾಮೀಜಿ ಅತ್ಯಾಚಾರ ಮಾಡಿದರು. ನಾನು ಅಲ್ಲಿಯೇ ಅಳುತ್ತಾ ಕುಳಿತುಕೊಂಡೆ. ನನ್ನ ಎದುರಿಗೆ ಮದ್ಯಪಾನ ಮಾಡಿ ನನ್ನನ್ನು ಕೆಟ್ಟದಾಗಿ ಬೈಯುತ್ತಿದ್ದರು ಎಂದು ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾಳೆ.
ಕಠಿಣ ಶಿಕ್ಷೆಗೆ ಆಗ್ರಹ:
ಮುರುಘಾ ಶರಣ ಸಾಕಷ್ಟು ಬಾಲಕಿಯರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆಯಿದೆ. ಆದರೆ ಸಾಕಷ್ಟು ಜನರು ದೂರು ನೀಡಲು ಮುಂದೆ ಬಂದಿಲ್ಲ. ಹಲವು ಬಾಲಕಿಯರನ್ನು ಪೋಷಕರು ವಾಪಸ್ ಮನೆಗಳಿಗೆ ಕರೆದೊಯ್ದಿದ್ದಾರೆ ಎಂದು ಬಾಲಕಿಯರಿಗೆ ಬೆಂಬಲವಾಗಿ ನಿಂತಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ತಿಳಿಸಿದ್ದಾರೆ.
‘ಶಿವಮೂರ್ತಿ ಮುರುಘಾ ಶರಣ ಆಡುತ್ತಿದ್ದ ಮಾತಿಗೂ, ನಡವಳಿಕೆಗೂ ಸಂಬಂಧವೇ ಇರಲಿಲ್ಲ. ತನಿಖಾಧಿಕಾರಿ ಸಮರ್ಪಕವಾಗಿ ವಿವರಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರೆ ಕಠಿಣ ಶಿಕ್ಷೆ ಆಗುತ್ತದೆ. ಇದು ಮಹತ್ವದ ಪ್ರಕರಣ. ನಾನು ಇಂಥ ಪ್ರಕರಣವನ್ನು ಹಿಂದೆಲ್ಲೂ ನೋಡಿರಲೇ ಇಲ್ಲ. ಇಡೀ ಕರ್ನಾಟಕದ ಜನರಿಗೆ ಆಗಿರುವ ನಂಬಿಕೆದ್ರೋಹ ಇದು’ ಎಂದು ಅವರು ವಿಷಾದಿಸಿದರು.
20 ವರ್ಷ ಜೈಲು ಶಿಕ್ಷೆ:
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಶಿವಮೂರ್ತಿ ಮುರುಘಾ ಶರಣನ ವಿರುದ್ಧ ಪೊಲೀಸರು ಪೊಕ್ಸೋ ಕಾಯ್ದೆಯೂ ಸೇರಿದಂತೆ ಹಲವು ಕಾಯ್ದೆಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದಾರೆ. ಅವರಿಗೆ ಕನಿಷ್ಠ 20 ವರ್ಷಗಳಿಂದ ಗರಿಷ್ಠ ಪ್ರಮಾಣದ ಜೀವಾವಾಧಿ (ಜೀವಿತಾವಧಿ) ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಪೋಕ್ಸೋ ಕಾಯ್ದೆಯ ಸೆಕ್ಷನ್ 17, 5(ಎಲ್), (6) ಅಡಿ ಮಕ್ಕಳ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗುವುದು ಅಪರಾಧ. ಈ ಅಪರಾಧಕ್ಕೆ ಕನಿಷ 20 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಜೀವಿತಾವಧಿ ಜೈಲು:
ಐಪಿಸಿ ಸೆಕ್ಷನ್ 376 (2)ಎನ್) ಹಾಗೂ 376 (3) ಅಡಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ 20 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದು. ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3 ಕ್ಲಾಸ್ (2) (ವಿ) ಅಡಿ ಜೀವಾವಧಿ ಶಿಕ್ಷೆಗೂ ಅವಕಾಶವಿದೆ. ಸೆಕ್ಷನ್ 376 ಡಿಎರ ಅಡಿಯಲ್ಲಿ 16 ವರ್ಷದೊಳಗಿನ ಮಕ್ಕಳ ಗ್ಯಾಂಗ್ ರೇಪ್ ಅಪರಾಧಕ್ಕೆ ಜೀವಿತಾವಧಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಸೆಕ್ಷನ್ 201ರ ಅಡಿಯಲ್ಲಿ ಸಾಕ್ಷ್ಯನಾಶ, ಸೆಕ್ಷನ್ 202ರ ಅಡಿಯಲ್ಲಿ ಅಪರಾಧ ಮುಚ್ಚಿಡುವುದು. ಸೆಲ್ಷಮ್ 372ರ ಅಡಿಯಲ್ಲಿ ವೇಶ್ಯಾವಾಟಿಕೆ ಮತ್ತಿತರ ಉದ್ದೇಶಗಳಿಗೆ 16 ವರ್ಷದೊಳಗಿನ ಬಾಲಕಿಯನ್ನು ಬಳಸುವುದಕ್ಕೆ 10 ವರ್ಷದ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.
ಶಿಕ್ಷೆ ಜೊತೆಗೆ ದಂಡ:
ಸೆಕ್ಷನ್ 366ರ ಪ್ರಕಾರ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಬಂಧಕ್ಕೆ ತಳ್ಳುವ ಶಿಕ್ಷೆಗೆ 10 ವರ್ಷ ಶಿಕ್ಷೆ ಮತ್ತು ದಂಡ. ಸೆಕ್ಷನ್ 504 ಶಾಂತಿಭಂಗದ ಉದ್ದೇಶದಿಂದ ನಡೆಸುವ ನಿಂದನೆಗೆ 2 ವರ್ಷ ಜೈಲು, ಸೆಕ್ಷನ್ 506ರ ಅಡಿಯಲ್ಲಿ ಜೀವ ಬೆದರಿಕೆ ಹಾಗೂ ಧಾರ್ಮಿಕ ಸ್ಥಳಗಳ ದುರುಪಯೋಗ ತಡೆ ಕಾಯ್ದೆಯಡಿ 5 ವರ್ಷ ಶಿಕ್ಷೆ ವಿಧಿಸಲು ಅವಕಾಶ ಇದೆ.