ಬೆಂಗಳೂರು,ಸೆ.27-ಕಾನೂನುಬಾಹಿರ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿ ಸಮಾಜದ ಸ್ವಾಸ್ಯ ಹಾಳು ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಪಿಎಫ್ಐ ಮುಖಂಡರ ಹಾಗೂ ಕಾರ್ಯಕರ್ತರ ಮೇಲೆ ದಾಳಿಯನ್ನು ರಾಜ್ಯ ಪೊಲೀಸರು ಮುಂದುವರೆಸಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ದಾಳಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸರು ದಾಳಿ ಮುಂದುವರೆಸಿ ದೇಶ-ವಿದೇಶಗಳಿಂದ ಹಣ ಸಂಗ್ರಹಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳ ಪಿಎಫ್ಐ ಮುಖಂಡರು ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು, ಸೇರಿದಂತೆ ದಕ್ಷಿಣ ಕನ್ನಡ, ವಿಜಯಪುರ, ಶಿವಮೊಗ್ಗ, ರಾಮನಗರ, ಕೋಲಾರ, ಉಡುಪಿ, ರಾಯಚೂರು, ಚಾಮರಾಜನಗರ ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಮುಂಜಾನೆಯಿಂದ ರಾಜ್ಯ ಪೊಲೀಸರು ದಾಳಿಯಲ್ಲಿ 80 ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದ್ದು ಅವರಲ್ಲಿ ಬಹುತೇಕ ಮಂದಿಯನ್ನು ಬಂಧಿಸಲಾಗಿದೆ.
ಎನ್ಐಎ ಮಾಹಿತಿ ಆಧರಿಸಿ, ರಾಜ್ಯದ ವಿವಿಧೆಡೆ ಪಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ನಾಯಕರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು ವಶಕ್ಕೆ ತೆಗೆದುಕೊಂಡ ಎಲ್ಲರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಅಗತ್ಯವೆನಿಸಿದವರನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಎನ್ಐಎ ದೇಶದ ಹಲವು ಕಡೆಗಳಲ್ಲಿ ದಾಳಿ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದುಕೊಂಡಿತ್ತು. ರಾಜ್ಯವಲ್ಲದೆ ಬೆಂಗಳೂರು ನಗರ ಪೊಲೀಸರು ಸಹ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ 15 ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ರಾಜ್ಯದ ಉದ್ದಗಲಕ್ಕೂ ಪಿಎಫ್ಐ ಜೊತೆ ನಂಟು ಹೊಂದಿದ ಬೀದರ್, ರಾಯಚೂರು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಫ್‌ಐ ಕಾರ್ಯಕರ್ತ ಮತ್ತು ನಾಯಕರಿಗೆ ಸೇರಿದ ಸ್ಥಳ, ಕಚೇರಿ ಮತ್ತು ನಿವಾಸದ ಮೇಲೆ ದಾಳಿಯನ್ನು ನಡೆಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಹಣಕಾಸಿನ ನೆರವನ್ನು ಪಡೆದ ಅನುಮಾನದ ಮೇಲೆ ಈ ಮಹತ್ವದ ಕಾರ್ಯಾಚರಣೆ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲೆಗಳಲ್ಲಿ ಜೆಲ್ಲೆಗಳ ಎಸ್ಪಿ ನೇತೃತ್ವದಲ್ಲಿ ದಾಳಿಯನ್ನು ನಡೆಸಿ ಬಂಧಿತ ಹಾಗೂ ವಶಕ್ಕೆ ತೆಗೆದುಕೊಂಡ 80ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ..
ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ದಾಳಿಯ ನಿಗಾ ವಹಿಸಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಜನರನ್ನು ವಶಕ್ಕೆ ಪಡೆದಿದ್ದಾರೆ? ಮನೆ, ಕಚೇರಿಗಳಲ್ಲಿ ಯಾವೆಲ್ಲಾ ವಸ್ತುಗಳು ಸಿಕ್ಕಿವೆ ಎನ್ನವುದರ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಗ್ರಾಮಾಂತರದಲ್ಲಿ ದಾಳಿ:
ಬೆಂಗಳೂರು ಗ್ರಾಮಾಂತರದ
ಜಿಲ್ಲೆಯ ವಿಜಯಪುರ, ಹೊಸಕೋಟೆ ಸೇರಿದಂತೆ ಒಟ್ಟು 9 ಮಂದಿ ಪಿಎಫ್‌ಐ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸರು ಪಿಎಫ್ಐ ಸಂಘಟನೆಗಳಲ್ಲಿ ತೊಡಗಿದ್ದ ಮೂವರು ಹಾಗೂ ವಿಜಯಪುರ, ಹೊಸಕೋಟೆ ಸೇರಿದಂತೆ 9 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
ಮಂಗಳೂರಿನಲ್ಲಿ ಶೋಧ:
ಮಂಗಳೂರು ಪೊಲೀಸರು ಪಿಎಫ್ಐ ಕಾರ್ಯಾಕರ್ತರ ಮನೆಗಳ ಮೇಲೆ ದಾಳಿ ಮಾಡಿ ಜಿಲ್ಲಾಧ್ಯಕ್ಷ ಸೇರಿ 14ಕ್ಕೂ ಹೆಚ್ಚು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಕಾರ್ಯಾಚರಣೆ ಕೈಗೊಂಡು 14ಕ್ಕೂ ಅಧಿಕ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್, ಮುಖಂಡರಾದ ಫಿರೋಜ್ ಖಾನ್, ರಾಜಿಕ್, ಮುಜಾವರ್, ನೌಫಲ್ ಸೇರಿದಂತೆ ಹಲವು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಪುತ್ತೂರು ಭಾಗದಲ್ಲಿ ದಾಳಿ ನಡೆಸಲಾಗಿತ್ತು. ವಶಕ್ಕೆ ಪಡೆದುಕೊಂಡ ಪಿಎಫ್ಐ ಮುಖಂಡರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ಜಿಲ್ಲಾಧ್ಯಕ್ಷ ಅಶ್ಪಾಕ್ ಸೆರೆ:
ವಿಜಯಪುರ ಜಿಲ್ಲಾ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ ಅಶ್ಪಾಕ್ ಜಮಖಂಡಿಯನ್ನು ಮನೆಯಲ್ಲಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಫ್ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿದಂತೆ ಇತರೆ ವಿಷಯಗಳ ವಿಚಾರಣೆಯನ್ನು ಪೊಲೀಸರು ನಡೆಸಿ ದಾಳಿ ಮುಂದುವರೆದಿದ್ದು, ಹೆಚ್ಚಿನ ಮಾಹಿತಿಯನ್ನು ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.
7 ಮಂದಿ ವಶ:
ಬೆಳಗಾವಿಯ ಪಿಎಫ್ಐ ಕಾರ್ಯಕರ್ತ ಸಮೀವುಲ್ಲಾ, ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಜಖೀವುಲ್ಲಾ ಫೈಜಿ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ಓರ್ವನಿಗೆ ಅನಾರೋಗ್ಯ ಹಿನ್ನೆಲೆ ವಶಕ್ಕೆ ಪಡೆಯದೇ ಕೇವಲ ವಿಚಾರಣೆ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಎನ್ಐಎ ದಾಳಿ ಖಂಡಿಸಿ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ನೇತೃತ್ವದಲ್ಲಿ ತಾಲೂಕಿನ ಕಾಕತಿ ಹೊರವಲಯದಲ್ಲಿರುವ ಪುನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಪಿಐ, ಪಿಎಫ್ಐ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದ 7 ಮಂದಿಯನ್ನು ವಶಕ್ಕೆ ಪಡೆದು, ಮಾರ್ಕೆಟ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
10ಮಂದಿ ವಿಚಾರಣೆ:
ರಾಯಚೂರಿನಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಮುಖಂಡರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ಪಿಎಫ್ಐ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಳೇ ಹುಬ್ಬಳ್ಳಿಯ ಕಸಬಾಪೇಟ್ ಮತ್ತು ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪಿಎಫ್ ಐ ಮುಖಂಡರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಸಬಾಪೇಟ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ಜನರನ್ನು ಬಂಧಿಸಿದ್ದು, ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಫಾರುಕ್, ಸಿಕಂದರ್ ಮತ್ತು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಅಬ್ಬಾಸಲಿ ಮಂಟಗಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Previous Articleಅಪ್ರಾಪ್ತನಿಗೆ ಇರಿತ, ಬೆಳಗಾವಿ ಉದ್ವಿಗ್ನ
Next Article ಭ್ರಷ್ಟಾಚಾರ ಅಂದಿದ್ದಕ್ಕೆ ಜೈಲಿಗಟ್ಟಿದ ಶಾಸಕ