ಬೆಂಗಳೂರು,ಸೆ.1-
ಮಹಾನಗರ ಬೆಂಗಳೂರಿನಲ್ಲಿ ಪಿ.ಜಿ.ಗಳು ಹೆಚ್ಚಾದಂತೆ ದುಷ್ಕರ್ಮಿಗಳು ಇವುಗಳನ್ನು ಟಾರ್ಗೆಟ್ ಮಾಡಿಕೊಂಡು ಹಣ,ಒಡವೆ, ಇಲೆಕ್ಟ್ರಾನಿಕ್ ಉಪಕರಣಗಳನ್ನು ದೋಚಿ ಪರಾರಿಯಾಗುವ ಜೊತೆಗೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗುವ ಘಟನೆಗಳು ಕೂಡಾ ಹೆಚ್ಚಾಗುತ್ತಿವೆ.
ಇದೀಗ ಸುದ್ದಗುಂಟೆ ಪಾಳ್ಯದ ಮಹಿಳಾ ಪೇಯಿಂಗ್ ಗೆಸ್ಟ್(ಪಿಜಿ)ನ ಕೋಣೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಹಣ ದೋಚಿರುವ ಆಘಾತಕಾರಿ ಕೃತ್ಯ ನಡೆದಿದೆ.
ಕಳೆದ ಆ.29ರ ಮುಂಜಾನೆ 3ರ ವೇಳೆ ಪಿಜಿ ಬಳಿಗೆ ಮುಖಕ್ಕೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿ ಒಳಗೆ ನುಗ್ಗುವ ಮೊದಲು, ನೆಲ ಮಹಡಿಯಲ್ಲಿನ ಎಲ್ಲಾ ಕೊಠಡಿಗಳನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ
ಬಳಿಕ ಪಿಜಿಯೊಂದರ ಕೊಠಡಿಯಲ್ಲಿ ಮಲಗಿದ್ದ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ವಿರೋಧಿಸಿದಾಗ, ಚಾಕುವಿನಿಂದ ಬೆದರಿಸಿ, ಉಗುರುಗಳಿಂದ ಆಕೆಯ ಕಾಲುಗಳನ್ನು ಕೆರೆದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ
ನಂತರ ಆಕೆಯ ಕಪಾಟಿನಿಂದ 2,500 ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ. ಮಹಿಳೆ ತಕ್ಷಣ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತಿಕ್ರಮಣ, ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕಳ್ಳತನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕಾಮುಕ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.