ಬೆಂಗಳೂರು, ನ.25- ದೇಶದ ಹೆಮ್ಮೆಯ ಪ್ರತೀಕ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಲಘು ಯುದ್ಧ ವಿಮಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಹಾರಾಟ ನಡೆಸಿದರು.
ಈ ಮೂಲಕ ಯುದ್ಧ ವಿಮಾನದಲ್ಲಿ ದೇಶದ ಪ್ರಧಾನಿಯೊಬ್ಬರು ಬಹು ವರ್ಷಗಳ ನಂತರ ಹಾರಾಟ ನಡೆಸಿದ ಹೆಗ್ಗಳಿಕೆಗೆ ಮೋದಿಯವರು ಪಾತ್ರರಾಗಿದ್ದಾರೆ.
ವಿಶೇಷ ವಿಮಾನದಲ್ಲಿ ಇಂದು ಬೆಳಿಗ್ಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಭದ್ರತಾ ದೃಷ್ಟಿಯಿಂದ ಇದನ್ನು ಗೌಪ್ಯವಾಗಿ ಇಡಲಾಗಿತ್ತು. ಈ ಮೊದಲೇ ಮೋದಿಯವರು ಬೆಂಗಳೂರಿಗೆ ಆಗಮಿಸಿದ ವೇಳೆ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಹೀಗಾಗಿ ಅವರಿಗೆ ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ವೈದ್ಯಕೀಯ ತಪಾಸಣೆ ನಡೆಸಿದ್ದರು. ಏಕೆಂದರೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಯುವ ವೇಳೆ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾದರೂ ಬಹುದೊಡ್ಡ ಸಮಸ್ಯೆಗೆ ಸಿಲುಕುವ ಸಂಭವವಿರುತ್ತದೆ.
ಹೀಗಾಗಿ ಬೆಂಗಳೂರಿಗೆ ಬಂದ ಮೋದಿಯವರನ್ನು ನುರಿತ ತಜ್ಞ ವೈದ್ಯರ ತಂಡ ದೈಹಿಕ ತಪಾಸಣೆ ನಡೆಸಿದ ಬಳಿಕವೇ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲು ಅನುಮತಿ ನೀಡಿದರು. ನಿಯಮದಂತೆ ಮೋದಿಯವರಿಗೆ ಭಾರತೀಯ ವಾಯುಪಡೆಯ ಸಮವಸ್ತ್ರವನ್ನು ನೀಡಲಾಗಿತ್ತು. ಎಚ್‍ಎಎಲ್ ವಿಮಾನ ನಿಲ್ದಾಣದಿಂದ ಹೊರಟ ತೇಜಸ್ ಯುದ್ಧ ವಿಮಾನ ಆಗಸದಲ್ಲಿ ಸುಮಾರು 10 ನಿಮಿಷಕ್ಕೂ ಹೆಚ್ಚು ಹಾರಾಟ ನಡೆಸಿದೆ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ‘ತೇಜಸ್‌ನಲ್ಲಿ ಕಿರು ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವ ವಿಸ್ಮಯಕಾರಿಯಾಗಿತ್ತು. ನಮ್ಮ ದೇಶದ ಸ್ಥಳೀಯ ಶಕ್ತಿ ಸಾಮರ್ಥ್ಯಗಳ ಮೇಲಿನ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಮತ್ತು ಆಶಾವಾದ ಹುಟ್ಟುವಂತೆ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.