ಬೆಂಗಳೂರು,ಅ.25- ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಸಂತೋಷ್ ಬಂಧನದ ಬೆನ್ನಲ್ಲೇ ಶೋಕಿ,ಪ್ರತಿಷ್ಟೆ, ಅದೃಷ್ಟ ಮೊದಲಾದ ಕಾರಣಗಳಿಂದ ಹುಲಿ ಉಗುರಿನ ಸರ ಧರಿಸಿದವರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತಿದೆ.
ಸಂತೋಷ್ ಬಂಧನದ ಬೆನ್ನಲ್ಲೇ ಹುಲಿ ಉಗುರು ಧರಿಸಿದವರ ಕುರಿತು ಪೊಲೀಸರು ಮತ್ತು ಅರಣ್ಯ ವಿಚಕ್ಷಣ ಧಳಕ್ಕೆ ಮಾಹಿತಿಯ ಸರಮಾಲೆ ಹರಿದು ಬರುತ್ತಿದ್ದು,ಅದನ್ನು ಆಧರಿಸಿ ಇದೀಗ ಪೊಲೀಸರು ಹುಲಿ ಉಗುರು ಧರಿಸಿದವರ ಬೆನ್ನು ಹತ್ತಿದ್ದಾರೆ.
ಇದರ ನಡುವೆ ವಿನಯ್ ಗುರೂಜಿ (Vinay Guruji) ಹುಲಿ ಚರ್ಮದ ಮೇಲೆ ಕುಳಿತಿರುವ ಚಿತ್ರಗಳು ವೈರಲ್ ಆಗಿದ್ದು,ಅದರ ಪರಿಶೀಲನೆಯಲ್ಲಿ ಪೊಲೀಸ್ ತಂಡ ನಿರತವಾಗಿದೆ.ಒಂದು ವೇಳೆ ಅದು ನಿಜವಾದ ಹುಲಿ ಚರ್ಮವಾಗಿದ್ದರೆ ವಿನಯ್ ಗುರೂಜಿ ಬಂಧನ ಖಚಿತ ಎನ್ನಲಾಗುತ್ತಿದೆ.
ಮತ್ತೊಂದೆಡೆ,ಚಾಲೆಂಜಿಂಗ್ ಸ್ಟಾರ್ ದರ್ಶನ್,ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ಕೋಮಲ್,ರಾಕಲೈನ್ ವೆಂಕಟೇಶ್ ಮೊದಲಾದ ಖ್ಯಾತನಾಮರು ಹುಲಿ ಉಗುರು ಧರಿಸಿರುವ ಕುರಿತಂತೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು,ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಕಾನೂನು ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿಗೆ ಸಂಕಷ್ಟ ಎದುರಾಗಿದೆ.
ಸ್ವಾಮೀಜಿ ಹುಲಿ ಉಗುರಿನ ಚೈನ್ ಹಾಕಿಕೊಂಡ ಪೋಟೋ ವೈರಲ್ ಆದ ಬಳಿಕ ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯ ಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.ಆದರೆ ಅದು ಆರ್ಟಿಫಿಷಿಯಲ್ ಹುಲಿ ಉಗುರು.ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಅದನ್ನು ಎಸೆದಿದ್ದೇನೆ ಎಂದು ಸ್ವಾಮೀಜಿ ಅರಣ್ಯಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಅದನ್ನು ಅಧಿಕಾರಿಗಳು ನಂಬುತ್ತಿಲ್ಲ.ಏಕೆಂದರೆ ಮೈತುಂಬಾ ಒಡವೆ ಹಾಕಿಕೊಳ್ಳುವ ಸ್ವಾಮೀಜಿ ಆರ್ಟಿಫಿಷಿಯಲ್ ಹುಲಿ ಉಗುರನ್ನು ಹೇಗೆ ಹಾಕಿಕೊಳ್ಳಲು ಸಾಧ್ಯ ಎಂದು ಅದನ್ನು ಪರೀಕ್ಷೆ ಮಾಡಲು ಹುಡುಕುತ್ತಿದ್ದಾರೆ.
ಖ್ಯಾತ ನಟ ದರ್ಶನ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂಬ ಆರೋಪ ಬಂದಿದ್ದು, ಜೊತೆಗೆ ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.