ಬೆಂಗಳೂರು,ಜ.8- ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಕಾಟೇರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸುತ್ತಿದೆ.ಈ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಪಾಲ್ಗೊಂಡ ನಟ ದರ್ಶನ್,ನಿರ್ಮಾಪಕ ರಾಕ್ ಲೈನ್ ವೆಂಕಟೇಶ್,ಅಭಿಷೇಕ್ ಅಂಬರೀಶ್ ಗೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಜನವರಿ 3ರಂದು ಬೆಂಗಳೂರಿನ ಒರಾಯನ್ ಮಾಲ್ ಸಮೀಪದ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಬ್ ನ ಅವಧಿ ಮುಕ್ತಾಯವಾದರೂ ತಲೆ ಕೆಡಿಸಿಕೊಳ್ಳದ ಸಿನೆಮಾ ತಂಡ ಹಾಗೂ ಇತರೆ ಆಹ್ವಾನಿತರು ಮುಂಜಾನೆವರೆಗೆ ಪಾರ್ಟಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮುಂಜಾನೆವರೆಗೆ ಪಾರ್ಟಿ ಮಾಡಲು ಅವಕಾಶ ನೀಡಿದ ಜೆಟ್ ಲ್ಯಾಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಜೊತೆಗೆ ಪಾರ್ಟಿ ಆಯೋಜಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಷ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಅಲ್ಲದೇ ಪಾರ್ಟಿಯಲ್ಲಿದ್ದ ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಸದ್ಯ ನಟ ದರ್ಶನ್, ಅಭಿಷೇಕ್ ಅಂಬರೀಷ್, ರಾಕ್ಲೈನ್ ವೆಂಕಟೇಶ್ ಅವರಿಗೆ ಸುಬ್ರಹ್ಮಣ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್ ಅವರು ನೋಟೀಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.
ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ತೆರೆಯಲು ಅವಕಾಶ ಇದೆ. ಆದರೆ, ನಿಯಮವನ್ನು ಮೀರಿ ಪಾರ್ಟಿ ನಡೆಸಲಾಗಿದೆ.
ಪಾರ್ಟಿ ನಡೆಸುತ್ತಿದ್ದ ಮಾಹಿತಿ ತಿಳಿದ ಅಭಿಮಾನಿಗಳು ಸ್ಟಾರ್ ನಟರನ್ನು ನೋಡಲು ಮುಂಜಾನೆಯೂ ಆಗಮಿಸಿದ್ದರು.
ಹೀರೋಗಳು ರಸ್ತೆ ಮೇಲೆಯೇ ಕಾರು ನಿಲ್ಲಿಸಿ ಸಂಚಾರಕ್ಕೆ ಅಡಚಣೆ ಮಾಡಿದ್ದರು ಎನ್ನಲಾಗಿದೆ. ಸ್ಟಾರ್ಸ್ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿತ್ತು.
ಪೊಲೀಸರ ವಿರುದ್ಧ ತನಿಖೆ:
ಈ ನಡುವೆ ಅವಧಿ ಮೀರಿ ಪಬ್ ತೆರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಸುಬ್ರಹ್ಮಣ್ಯ ನಗರ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು ಮಲ್ಲೇಶ್ವರಂ ಠಾಣೆಯ ಎಸಿಪಿಗೆ ಆದೇಶಿಸಿದ್ದಾರೆ.ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾಧಿಕಾರಿ, ಸಬ್ ಇನ್ಸ್ಪೆಕ್ಟರ್, ನಾಲ್ವರು ಕಾನ್ಸ್ಟೇಬಲ್ಗಳಿಗೆ ನೋಟಿಸ್ ನೀಡಲಾಗಿದೆ.
ಜನವರಿ 3 ರಂದು ಮಧ್ಯರಾತ್ರಿ ಕಳೆದು ಮರುದಿನ ಬೆಳಗಿನ ಜಾವದವರೆಗೆ ಪಾರ್ಟಿ ನಡೆದಿದೆ.ಅದು ಯಾವ ರೀತಿ ನಡೆದಿತ್ತು.ಯಾರೆಲ್ಲಾ ಬಂದಿದ್ದರು, ಅವಧಿ ಮೀರಿ ಪಬ್ ತೆರೆಯಲು ಅವಕಾಶ ನೀಡಿದ್ದೇಕೆ. ಘಟನೆ ಬಳೆಕಿಗೆ ಬಂದರೂ ಕ್ರಮ ಏಕೆ ಕೈಗೊಂಡಿಲ್ಲ ಎಂದು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.