ಬೆಂಗಳೂರು,ಆ.19 – ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದು, ರಾಜಕೀಯ ಆಸಕ್ತರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿವೆ . ಮುಂಬರುವ ಲೋಕಸಭಾ Electionಯಲ್ಲಿ ಕರ್ನಾಟಕದಿಂದ ಅತ್ಯಧಿಕ ಸಂಖ್ಯೆಯ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದಾಗಿ ವರಿಷ್ಠರಿಗೆ ಬರವಸೆ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಇದೀಗ ಗೆಲ್ಲುವ ಸಾಮರ್ಥ್ಯ ಇರುವ ಅನ್ಯ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಅದರಲ್ಲೂ ಈ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದು ಹಲವು ಕಾರಣಗಳಿಂದಾಗಿ ಬಿಜೆಪಿ ಸೇರಿದ ಪ್ರಮುಖರನ್ನು ಇದೀಗ ಕಾಂಗ್ರೆಸ್ಸ್ ನತ್ತ ಸಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇದರ ನೇತೃತ್ವ ವಹಿಸಿದ್ದು ಹಲವರು ಕಾಂಗ್ರೆಸ್ ಪಕ್ಷ ಸೇರಲು ಆಸಕ್ತಿ ತೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದೆ ಈ ಪಕ್ಷಾಂತರ ಪರ್ವದ ಮೊದಲ ಹಂತವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಬೆಂಗಳೂರಿನ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಇತ್ತೀಚೆಗೆ ಪ್ರತ್ಯೇಕವಾಗಿ ಭೇಟಿ ಮಾಡಿ, ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಈ ಇಬ್ಬರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಇವರಿಂದ ತೆರವಾದ ವಿಧಾನಸಭೆ ಕ್ಷೇತ್ರಗಳಿಗೆ ಇವರ ಕುಟುಂಬ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎಂದು ಗೊತ್ತಾಗಿದೆ.
ಶಿವರಾಮ ಹೆಬ್ಬಾರ್ ಅವರನ್ನು ಕೆನರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಸೋಮಶೇಖರ್ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆದಿದೆ. ಈ ಸದ್ಯ ಈ ಇಬ್ಬರೂ ಮುಖಂಡರು ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸುತ್ತಿದ್ದು ಸದ್ಯದಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಬಲಿಗರ ಸೇರ್ಪಡೆ:
ಈ ಬೆಳವಣಿಗೆಗೆ ಪೂರಕ ಎಂಬಂತೆ ಶಾಸಕ ಎಸ್ ಟಿ ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಸೇರಲು ವೇದಿಕೆ ಸಜ್ಜುಗೊಂಡಿದೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಹಿರಿಯ ನಾಯಕರು ಆಗಸ್ಟ್ 21ರಂದು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಆನಂತರ ಸೋಮಶೇಖರ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಇವರಷ್ಟೇ ಅಲ್ಲದೆ ಬೆಂಗಳೂರಿನ ಬಿಜೆಪಿ ಶಾಸಕರಾದ ಬೈರತಿ ಬಸವರಾಜ್ ಮತ್ತು ಗೋಪಾಲಯ್ಯ ಅವರ ಸೇರ್ಪಡೆ ಕುರಿತು ಚರ್ಚೆ ಮುಂದುವರೆದಿದೆ ಎಂದು ಹೇಳಲಾಗಿದೆ.
ಈ ನಡುವೆ, ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಕೆಲವು ಮಾಜಿ ಶಾಸಕರನ್ನೂ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಜಗದೀಶ ಶೆಟ್ಟರ್ ಅವರ ಆಪ್ತರಾಗಿರುವ ಮಾಜಿ ಸಚಿವರೊಬ್ಬರು ಈಗಾಗಲೇ ಕಾಂಗ್ರೆಸ್ ಸೇರಲು ಒಲವು ತೋರಿದ್ದಾರೆ. ಅಲ್ಲದೆ, ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಮಾಜಿ ಶಾಸಕ ಮತ್ತು ಸಂಸದ ಆಯನೂರು ಮಂಜುನಾಥ್ ಕೂಡಾ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆಂಬ ಮಾಹಿತಿಯೂ ಇದೆ. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಪರಿಷತ್ ನ ಪದವೀಧರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಇದೆ.
ಸೋಮಣ್ಣ ಮನವೊಲಿಕೆ:
ಮತ್ತೊಂದೆಡೆ ಬಿಜೆಪಿ ನಾಯಕರ ನಿಲುವಿನಿಂದ ಬೇಸರಗೊಂಡಿರುವ ವೀರಶೈವ ಸಮುದಾಯದ ಪ್ರಭಾವಿ ನಾಯಕ ಹಾಗೂ ಮಾಜಿ ಮಂತ್ರಿ ವಿ ಸೋಮಣ್ಣ ಅವರನ್ನು ಕಾಂಗ್ರೆಸ್ ಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿವೆ.
ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ತಮ್ಮ ಸ್ವ ಕ್ಷೇತ್ರವನ್ನು ಬಿಟ್ಟು ಮುಖ್ಯಮಂತ್ರಿಯ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದು ಸೋಲು ಕಂಡಿರುವ ಸೋಮಣ್ಣ ಅವರಿಗೆ ಬಿಜೆಪಿ ನಾಯಕರು ಯಾವುದೇ ಮಾನ್ಯತೆ ನೀಡುತ್ತಿಲ್ಲ ಎಂಬ ಅಂಶ ಅವರಿಗೆ ಬೇಸರ ತರಿಸಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಒಲವು ಹೊಂದಿರುವ ಅವರನ್ನು ಪಕ್ಷದ ನಾಯಕರು ಮೂಲಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸೋಮಣ್ಣ ಅವರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರನ್ನು ಕಾಂಗ್ರೆಸ್ ಗೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು ಅವರನ್ನು ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರ ಇಲ್ಲವೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತಂತೆ ಚರ್ಚೆಗಳು ನಡುಗಿದೆ ಎಂದು ಕಾಂಗ್ರೆಸ್ಸಿನ ಮೂಲಗಳು ತಿಳಿಸಿವೆ.
ಭವಿಷ್ಯದ ನಿರ್ಧಾರ:
ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಭವಿಷ್ಯಕ್ಕಾಗಿ ರಾಜಕಾರಣದಲ್ಲಿ ತೀರ್ಮಾನ ತೆಗೆದುಕೊಳ್ಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
ಈ ಹಿಂದೆ ಬಿಜೆಪಿಯವರು ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳ ಶಾಸಕರನ್ನು ಸೆಳೆದುಕೊಂಡಿದ್ದಾರೆ. ಆಗ ಅವರು ಮಾಡಿದ್ದೆಲ್ಲಾ ಸರಿಯೇ ಎಂದು ತಿರುಗೇಟು ನೀಡಿದರು.
ಬಿಜೆಪಿ ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಸೆಳೆದಾಗ ತಪ್ಪು ಎನಿಸಿರಲಿಲ್ಲವೇ, ಕಾಂಗ್ರೆಸ್‍ನತ್ತ ಶಾಸಕರು ಬರುತ್ತಾರೆ ಎಂದು ಚರ್ಚೆಯಾಗುತ್ತಿದ್ದಂತೆ ವ್ಯಾಪಕವಾದ ಟೀಕೆಗಳು ಕೇಳಿಬರುತ್ತಿರುವುದೇಕೆ ಎಂದು ಪ್ರಶ್ನಿಸಿದರು
ದೇಶದ ಭವಿಷ್ಯ ಹಾಗೂ ವೈಯಕ್ತಿಕ ಅನುಕೂಲಕ್ಕಾಗಿ ತೀರ್ಮಾನ ತೆಗೆದುಕೊಳ್ಳುವವರನ್ನು ತಡೆಯಲು ಸಾಧ್ಯವಿಲ್ಲ. ಈ ಹಿಂದೆ ಯಾರ್ಯಾರು, ಏನೇನು ಮಾತನಾಡಿದ್ದಾರೆ ಎಂಬುದನ್ನು ನಾನು ಬಿಚ್ಚಿ ಹೇಳಬೇಕೆ ಎಂದು ಪ್ರಶ್ನಿಸಿದರು.
ನೇಣು ಹಾಕಿಕೊಳ್ಳುವುದು :
ಮತ್ತೊಂದೆಡೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಕಾಂಗ್ರೆಸ್ ಸೇರುವುದಕ್ಕಿಂತ ರಾಜಕೀಯವಾಗಿ ನೇಣು ಹಾಕಿಕೊಳ್ಳುವುದೇ ಉತ್ತಮ ಎಂದು ಶಾಸಕರು ತಮ್ಮ ಬಳಿ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಕಾರಣಗಳಿಂದ ಕೆಲವು ಶಾಸಕರು ಅಸಮಾಧಾನಗೊಂಡಿರಬಹುದು. ಹಾಗೆಂದ ಮಾತ್ರಕ್ಕೆ ಅವರು ಬಿಜೆಪಿಯನ್ನು ಬಿಟ್ಟು ಹೋಗುತ್ತಾರೆಂದು ಭಾವಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ರಾಜಕೀಯವಾಗಿ ನೇಣು ಹಾಕಿಕೊಳ್ಳುತ್ತೇವೆ ಹೊರತು ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ್ದಾರೆ.
ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ನಮ್ಮ ಬಳಿ ಹಂಚಿಕೊಂಡಿದ್ದಾರೆ. ನಾವೆಲ್ಲರೂ ಕುಳಿತು ಗೊಂದಲಗಳನ್ನು ಸರಿಪಡಿಸುತ್ತೇವೆ ಎಂದರು
ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮರೆಮಾಚಲು ಆಪರೇಷನ್ ಹಸ್ತ ಸುದ್ದಿಯನ್ನು ಹಬ್ಬಿಸುತ್ತಿದೆ. ಸ್ವತಃ ಶಾಸಕರೇ ಪಕ್ಷ ಬಿಡುವುದಿಲ್ಲ ಎಂದು ಹೇಳಿದ ಮೇಲೆ ಇದು ಮುಗಿದ ಅಧ್ಯಾಯ.ಕರ್ನಾಟಕ ಗೆದ್ದ ತಕ್ಷಣ ದೇಶವನ್ನೇ ಗೆದ್ದಿದ್ದೇವೆ ಎಂದು ಕಾಂಗ್ರೆಸ್‍ನವರು ಬೀಗುತ್ತಿದ್ದಾರೆ.ಉತ್ತರಪ್ರದೇಶ, ಉತ್ತರಖಂಡ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ALSO READ
ಪರಿಷತ್ ನಾಮಕರಣ: ಸಿಕ್ಕವರಿಗೆ ಸೀರುಂಡೆ (ಸುದ್ದಿ ವಿಶ್ಲೇಷಣೆ) | Karnataka Vidhan Parishad
LATEST KANNADA NEWS only at www.varthchakra.com