ಬೆಂಗಳೂರು.
‘ಏಮ್ಸ್(AIMS) ನೇಮಕಾತಿ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ JDS ನ ಭೋಜೇಗೌಡರ ಹೇಳಿಕೆ ಕೇವಲ ಚುನಾವಣಾ ಸ್ಟಂಟ್’ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಮತ್ತೊಂದೆಡೆ ‘ತಮ್ಮ ವಿರುದ್ಧ ಭೋಜೇಗೌಡ ಸುಳ್ಳು ಆರೋಪ ಮಾಡಿದ್ದಾರೆ ಈ ಮೂಲಕ ತಮ್ಮ ವರ್ಚಸ್ಸಿಗೆ ಧಕ್ಕೆ ತಂದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ’ ಎಚ್ಚರಿಸಿ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಪಕ್ಷದ ಪರವಾಗಿ ಹೇಳಿಕೆ ನೀಡಿರುವ ಬಿಜೆಪಿ ಎಸ್‍ಸಿ ಮೋರ್ಚಾ (BJP SC Morcha) ದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) , ‘ಸಚಿವ ಪ್ರಹ್ಲಾದ್ ಜೋಶಿ ಅವರು JDS ಪಕ್ಷದ ಪಂಚರತ್ನ ಯಾತ್ರೆ ( Pancharatna Yatra) ಯನ್ನು ನವಗ್ರಹ ಯಾತ್ರೆ ಎಂದು ಟೀಕಿಸಿದ್ದರು. ಇದರಿಂದ ಕುಪಿತರಾದ ಜೆಡಿಎಸ್‍ನ ಎಲ್ಲ ನಾಯಕರು ಅವರ ವಿರುದ್ಧ ಮುಗಿ ಬಿದ್ದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಬ್ರಾಹ್ಮಣರಾದ ಜೋಶಿಯವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಲ್ಲದೆ 8 ಜನ ಉಪ ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬ್ರಾಹ್ಮಣರ ಕುರಿತ ಹೇಳಿಕೆಗೆ ತೀವ್ರ ವಿರೋಧ ಗಮನಿಸಿ, ಇದೀಗ ಜೋಶಿಯವರು ನೇಮಕಾತಿಗೆ ಸಂಬಂಧಿಸಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇವೆಲ್ಲವೂ ಅವರು ಜನರನ್ನು ದಾರಿ ತಪ್ಪಿಸುವ ಚುನಾವಣಾ ಸ್ಟಂಟ್’ ಎಂದು ದೂರಿದರು.
‘MLC ಮಾಡಲು ಜೆಡಿಎಸ್‍ನವರು ಕೋಟಿಗಟ್ಟಲೆ ಹಣ ಕೇಳಿದ ನಿದರ್ಶನವಿದೆ. Election ಮಾಡಲು ನಮಗೆ ಹಣ ಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅದನ್ನು ಒಪ್ಪಿಕೊಂಡಿದ್ದಾರೆ. ಇವರೆಷ್ಟು ಭ್ರಷ್ಟರು ಎಂಬುದು ಇವರಿಗೇ ಗೊತ್ತಿಲ್ಲ. ಹೊರ ರಾಜ್ಯದವರಾದ ರಾಮಸ್ವಾಮಿಯವರನ್ನು ಹಣ ಪಡೆದು ರಾಜ್ಯಸಭಾ ಸದಸ್ಯ ಮಾಡಲು ಆ ಸ್ಥಾನವನ್ನು ಮಾರಾಟ ಮಾಡಿದ್ದರು. ಇದೆಲ್ಲವನ್ನೂ ಭ್ರಷ್ಟಾಚಾರ ಎನ್ನುವುದಿಲ್ಲವೇ? ಇವರಿಗೆ ಜನಮನ್ನಣೆ ಇಲ್ಲ. ಹತಾಶರಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ’ ಎಂದು ಹೇಳಿದರು.